ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

| Published : Jul 08 2024, 12:31 AM IST

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕಳೆದ ನಾಲ್ಕಾರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದೆ.

ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ೪೫ ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕಳೆದ ನಾಲ್ಕಾರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದೆ. ಶಿವಮೊಗ್ಗ ಜಿಲ್ಲೆಯ ತುಂಗ ಜಲಾಶಯ ಈಗಾಗಲೇ ಭರ್ತಿಯಾದ್ದರಿಂದ ಅಲ್ಲಿಂದ ಹೆಚ್ಚುವರಿ ನೀರು ಹರಿದು ಬಂದು ಜಲಾಶಯ ಸೇರುತ್ತಿದೆ. ಹೀಗಾಗಿ ಟಿ.ಬಿ.ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಸೇರಿ ನಾಲ್ಕು ಜಿಲ್ಲೆಗಳ ೩.೫ ಲಕ್ಷ ಹೆಕ್ಟೇರ್ ಪ್ರದೇಶ ಹಾಗೂ ಆಂಧ್ರದ ಅನಂತಪುರ, ಕರ್ನೂಲ್, ಕಡಪ, ತೆಲಂಗಾಣದ ಮಹಬೂಬ್ ನಗರ ಜಿಲ್ಲೆಗಳ ೨.೪೬ ಹೆಕ್ಟೇರ್‌ ಕೃಷಿ ಭೂಮಿಗಳಿಗೆ ತುಂಗಭದ್ರಾ ಜಲಾಶಯ ನೀರು ಉಣಿಸಲಿದೆ. ತುಂಗಭದ್ರಾ ಎಡದಂಡೆ ಮೇಲ್ಪಟ್ಟ ಕಾಲುವೆ ಹಾಗೂ ಬಲದಂಡೆ ಮೇಲ್ಪಟ್ಟ ಕಾಲುವೆಗಳ ಮೂಲಕ ಮೂರು ರಾಜ್ಯಗಳಿಗೆ ನೀರು ಹರಿಯಲಿದೆ. ಭತ್ತ, ಬಾಳೆ, ಕಬ್ಬು, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು ರೈತರು ಪ್ರಮುಖವಾಗಿ ಬೆಳೆಯುತ್ತಿದ್ದಾರೆ.

ಭಾನುವಾರ ಬೆಳಗಿನ ವರದಿ ಪ್ರಕಾರ ಜಲಾಶಯಕ್ಕೆ ೪೫ ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬಂದಿದ್ದರೆ, ಸಂಜೆ ಹೊತ್ತಿಗಾಗಲೇ ೩೯ ಸಾವಿರ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದ್ದರಿಂದ ಒಳ ಹರಿವು ಕಡಿಮೆಯಾಗುತ್ತಿದೆ. ಹವಮಾನ ಇಲಾಖೆ ವರದಿ ಪ್ರಕಾರ ಕಳೆದ ವರ್ಷಗಿಂತಲೂ ಈ ವರ್ಷ ಡ್ಯಾಂಗೆ ಉತ್ತಮ ಒಳಹರಿವು ಹರಿದು ಬರಲಿದೆ. ಮುಂದಿನ ತಿಂಗಳು ಆಗಷ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ಜಲಾಶಯ ಗರಿಷ್ಟ ಮಟ್ಟ ೧೬೩೩ ಅಡಿ, ಇಂದಿನ ಮಟ್ಟ ೧೫೯೭.೩೧ ಅಡಿ, ಒಳಹರಿವು ೪೫೫೦೦ ಕ್ಯೂಸೆಕ್ಸ್, ನೀರಿನ ಸಂಗ್ರಹ ೧೮.೨೪೯ ಟಿಎಂಸಿ ಇದೆ.