ಸಾರಾಂಶ
ದೊಡ್ಡಬಳ್ಳಾಪುರ: ಕೊರೋನಾ ಕಾಲಘಟ್ಟದ ನಂತರ ಶೇ. 30ರಷ್ಷು ಜನತೆ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಖ್ಯಾತ ಮನೋವೈದ್ಯ, ಪದ್ಮಶ್ರೀ ಪುರಸ್ಕೃತ ಡಾ.ಸಿ.ಆರ್.ಚಂದ್ರಶೇಖರ್ ತಿಳಿಸಿದರು.
ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸುರಾನಾ ಕಾಲೇಜು ಸಹಭಾಗಿತ್ವದಲ್ಲಿ ತಾಲೂಕಿನ ದೊಡ್ಡರಾಯಪ್ಪನಹಳ್ಳಿಯಲ್ಲಿ ನಡೆದ ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ಸಮೀಕ್ಷೆ ಪ್ರಕಾರ ಮನುಷ್ಯ ಅತಿಯಾದ ಒತ್ತಡಗಳಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾನೆ. ಯುವಕರು ಸಾಕಷ್ಟು ಮಂದಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಹೊರಬರಲು ಯೋಗ, ಧ್ಯಾನ, ವ್ಯಾಯಾಮ, ಉತ್ತಮ ಚಿಂತನೆಗಳನ್ನು ಮಾಡುವುದು, ಸಕಾರಾತ್ಮಕ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಕಾರಾತ್ಮಕ ಆಲೋಚನೆಗಳಿಂದ ಮನಸ್ಸನ್ನು ಪ್ರಫುಲ್ಲವಾಗಿಟ್ಟುಕೊಳ್ಳುವುದು ಸಾಧ್ಯ ಎಂದು ಹೇಳಿದರು.
ಅತಿಯಾದ ಆಸೆ, ಬೇಡದ ಚಿಂತೆಗಳು ಕೂಡ ಮಾನವನ ಆಕಾಂಕ್ಷೆಗಳಿಂದಲೂ ಕೂಡ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಇವುಗಳಿಂದ ಮನುಷ್ಯ ಹೊರ ಬರಲು ಒಂದು ವ್ಯವಸ್ಥಿತ ಸಮಾಲೋಚನೆ, ಮನಸ್ಸನ್ನು ಹಗುರಗೊಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳವುವುದು ಅಗತ್ಯ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನವೋದಯ ಚಾರಿಟಬಲ್ ತಂಡ ಗ್ರಾಮೀಣ ಆರೋಗ್ಯ ಅಧ್ಯಯನ ಕೇಂದ್ರವನ್ನು ತೆರೆದಿರುವುದು ಅಭಿನಂದನಾರ್ಹ. ಗ್ರಾಮೀಣರು ಇದನ್ನು ಸದ್ಬಳಸಿಕೊಳ್ಳುವ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.ತೂಬಗೆರೆ ಯುವ ಮುಖಂಡ ಉದಯಾರಾಧ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯುವಕ ಮಿತ್ರರು ಒತ್ತಡಗಳಿಗೆ ಒಳಗಾಗಿ ಸಾಕಷ್ಟು ಮಧ್ಯಪಾನ ಧೂಮಪಾನಗಳಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈಗಿನ ಸ್ಪರ್ಧಾ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಯುವಕ ಯುವತಿಯರು ಅತ್ಮಹತ್ಯೆಯಂತಹ ಕೆಲಸಗಳಿಗೆ ಕೈ ಹಾಕುತ್ತಿರುವುದು ವಿಷಾದಕರ ಸಂಗತಿ. ಮಾನಸಿಕ ಕಾರ್ಯಕ್ರಮಗಳಡಿ ನೀಡುವ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಯಾರು ಕೂಡ ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ನವೋದಯ ಟ್ರಸ್ಟ್ ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗಲು ಗ್ರಾಮೀಣ ಆರೋಗ್ಯ ಸೇವಾ ಕೇಂದ್ರ ತೆರೆದಿರುವುದು ಸಂತಸದ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರಾನ ಕಾಲೇಜು ಮುಖ್ಯಸ್ಥ ಡಾ. ಸುದರ್ಶನ್, ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಪರಮೇಶ್ವರ, ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಪೂರ್ಣಿಮಾ, ಗ್ರಾಮ ಪಂಚಾಯಿತಿ ಸದಸ್ಯೆ ಶ್ವೇತ ಮುನಿಶಾಮಿಗೌಡ, ಅರಣ್ಯ ಇಲಾಖೆ ಉಪ ವಲಯ ಅರಣ್ಯಧಿಕಾರಿ ಚಂದ್ರಶೇಖರ್, ಎಂಪಿಸಿಎಸ್ ಅಧ್ಯಕ್ಷ ಚೊಕ್ಕರೆಡ್ಡಿ, ನವೋದಯ ಚಾರಿಟೇಬಲ್ ಟ್ರಸ್ಟ್ ತಂಡದ ಲೋಹಿತ್ ವೈ.ಟಿ, ಕಾರ್ತಿಕ್ ಗೌಡ, ಮಂಜುನಾಥ್, ಏಕಾಶಿಪುರದ ರಾಜಣ್ಣ, ಆಶಾ ಕಾರ್ಯಕರ್ತೆಯರು, ಸುರಾನಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಫೋಟೋ- 19ಕೆಡಿಬಿಪಿ3-
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿಯಲ್ಲಿ ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರವನ್ನು ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಉದ್ಘಾಟಿಸಿದರು.