ಸಾರಾಂಶ
ಕೆ.ಎಂ. ಮಂಜುನಾಥ್ಬಳ್ಳಾರಿ: ಬರಗಾಲದ ನಡುವೆಯೂ ಗಣಿಜಿಲ್ಲೆ ಬಳ್ಳಾರಿ ಸೇರಿದಂತೆ ಬರಾಕೊವಿ (ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ) ಹಾಲು ಒಕ್ಕೂಟ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಏರಿಕೆ ಕಂಡಿದೆ!ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ಷೀರೋತ್ಪನ್ನದಲ್ಲಿ ಇಳಿಕೆಯಾಗದೆ ಗಮನಾರ್ಹ ಪ್ರಗತಿ ಸಾಧಿಸಿದೆ. ನಾಲ್ಕು ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.
ಬರಾಕೊವಿ ಹಾಲು ಒಕ್ಕೂಟದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ವರ್ಷ ನಿತ್ಯ 1,53,874 ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈ ವರ್ಷದಲ್ಲಿ ನಿತ್ಯ ಕ್ಷೀರೋತ್ಪನ್ನದ ಪ್ರಮಾಣ 1,70,509 ಲೀಟರ್ ಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ನಲ್ಲಿ ಬರಗಾಲ ಶುರುವಾದ ಬಳಿಕ ಹಾಲು ಉತ್ಪಾದನೆಯ ಪ್ರಮಾಣ ಗಮನಿಸಿದರೆ, ರೈತಾಪಿಗಳು ಜೀವನ ನಿರ್ವಹಣೆಗೆ ಪರ್ಯಾಯವಾಗಿ ಕ್ಷೀರೋತ್ಪನ್ನದ ಕಡೆಗೆ ಗಮನ ಹರಿಸಿರುವುದು ಸ್ಪಷ್ಟವಾಗುತ್ತದೆ.2022ರ ಡಿಸೆಂಬರ್ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 7556 ಲೀಟರ್ ಹಾಲು ಉತ್ಪಾದನೆಯಿತ್ತು. 2023ರ ಡಿಸೆಂಬರ್ ವರೆಗಿನ ಸರಾಸರಿಯಲ್ಲಿ 8,098 ಲೀಟರ್ ಹೆಚ್ಚಳವಾಗಿದೆ. ವಿಜಯನಗರ ಜಿಲ್ಲೆ 2022ರ ಡಿಸೆಂಬರ್ವರೆಗೆ 84,617 ಲೀಟರ್ ಇತ್ತು. 2023ರ ಡಿಸೆಂಬರ್ವರೆಗೆ 88,483 ಲೀಟರ್ಗೆ ಹೆಚ್ಚಳಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ 2022ರ ಡಿಸೆಂಬರ್ವರೆಗೆ 22,070 ಲೀಟರ್ ಇತ್ತು. ಈ ವರ್ಷ ಗಮನಾರ್ಹ ಬದಲಾವಣೆಯಾಗಿಲ್ಲ. ಕೊಪ್ಪಳ ಜಿಲ್ಲೆ 2022ರ ಡಿಸೆಂಬರ್ ವರೆಗೆ 49,712 ಲೀಟರ್ ಹಾಲುತ್ಪಾದನೆ ಇತ್ತು. 2023ರ ಡಿಸೆಂಬರ್ ಗೆ 52,018 ಲೀಟರ್ಗೆ ಏರಿಕೆ ಕಂಡಿದೆ.ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 2023ರ ಜನವರಿಯಲ್ಲಿ 6,909 ಲೀಟರ್ ಉತ್ಪಾದನೆಯಿತ್ತು. ಈ ವರ್ಷದ(2024) ಜನವರಿಗೆ 8,099 ಲೀಟರ್ ಗೆ ಹೆಚ್ಚಳಗೊಂಡಿದೆ.ವಿಜಯನಗರ ಜಿಲ್ಲೆಯಲ್ಲಿ 2023ರ ಜನವರಿಯಲ್ಲಿ 79,940 ಲೀಟರ್ ಉತ್ಪಾದನೆಯಾಗುತ್ತಿತ್ತು. ಈ ಬಾರಿ ಜನವರಿಯಲ್ಲಿ 85,855 ಲೀಟರ್ ಹೆಚ್ಚಿಸಿಕೊಂಡಿದ್ದು, ರಾಯಚೂರು ಜಿಲ್ಲೆಯಲ್ಲಿ 2023ರ ಜನವರಿಯಲ್ಲಿ 47,504 ಲೀಟರ್ ನಿಂದ 54,260 ಲೀಟರ್ಗೆ ಏರಿಕೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 2023ರ ಜನವರಿಯಲ್ಲಿದ್ದ 19521 ಲೀಟರ್ ಹಾಲು ಉತ್ಪಾದನೆ, 2024ರ ಜನವರಿಗೆ 22,295 ಲೀಟರ್ ಗೆ ಹೆಚ್ಚಳಗೊಂಡಿದೆ.805 ಹಾಲು ಉತ್ಪನ್ನ ಸಂಘಗಳು: ಬರಾಕೊವಿ ಹಾಲು ಒಕ್ಕೂಟದ ನಾಲ್ಕು ಜಿಲ್ಲೆಗಳಲ್ಲಿ 805 ಹಾಲು ಉತ್ಪನ್ನ ಸಂಘಗಳಿವೆ. ಈ ಪೈಕಿ ಬಳ್ಳಾರಿ 66, ರಾಯಚೂರು 125, ಕೊಪ್ಪಳ 264 ಹಾಗೂ ವಿಜಯನಗರ ಜಿಲ್ಲೆಯಲ್ಲಿ 350 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಾಲ್ಕು ಜಿಲ್ಲೆಗಳ ಪೈಕಿ ಸಂಘಗಳು ಹಾಗೂ ಹಾಲಿನ ಉತ್ಪಾದನೆಯಲ್ಲಿ ಬಳ್ಳಾರಿ ಜಿಲ್ಲೆ ಕೆಳಸ್ತರದಲ್ಲಿದೆ. ವಿಜಯನಗರ ಜಿಲ್ಲೆಯ ನಂತರದ ಸ್ಥಾನದಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿವೆ.ಹೊಳಲು ಗ್ರಾಮದಲ್ಲಿ ಅಧಿಕ ಉತ್ಪಾದನೆ: ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ಇಲ್ಲಿ ನಿತ್ಯ 4500 ಲೀಟರ್ ಹಾಲು ಉತ್ಪಾದನೆಗೊಳ್ಳುತ್ತಿದ್ದು, ಗ್ರಾಮದ ಬಹುತೇಕರು ಪಶುಸಂಗೋಪನೆಯನ್ನು ಹೆಚ್ಚು ಅವಲಂಬಿಸಿದ್ದಾರೆ.ಅಗತ್ಯ ಮೇವು ಪೂರೈಕೆ: ರಾಜ್ಯದಲ್ಲಿ ಬರಗಾಲ ಇದ್ದರೂ ಹಾಲು ಉತ್ಪಾದನೆಯಲ್ಲಿ ಯಾವುದೇ ಇಳಿಕೆ ಕಂಡಿಲ್ಲ. ಗಮನಾರ್ಹ ಸಂಗತಿ ಎಂದರೆ ಹಾಲು ಉತ್ಪನ್ನ ಸಾಕಷ್ಟು ಹೆಚ್ಚಳವಾಗಿದೆ. ನಮ್ಮ ಸಂಘಗಳ ಹಾಲು ಉತ್ಪಾದಕರಿಗೆ ಅಗತ್ಯದಷ್ಟು ಮೇವು ಆಹಾರ ಪೂರೈಕೆ ಮಾಡುತ್ತಿದ್ದೇವೆ ಎಂದು ಬರಾಕೊವಿ ಹಾಲು ಬಳ್ಳಾರಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿರುಪಾಲಪ್ಪ ತಿಳಿಸಿದರು.ಜೀವನ ಸುಧಾರಣೆ: ಬರಗಾಲದಲ್ಲಿ ಗುಳೆ ಹೋಗುವ ಬದಲು ಸ್ಥಳೀಯವಾಗಿಯೇ ಹಾಲು ಉತ್ಪಾದನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಹಾಲು ಉತ್ಪಾದನೆಯಿಂದ ಜೀವನ ಸುಧಾರಿಸಿದೆ ಎಂದು ರೈತ ವೆಂಕಟರಮಣಪ್ಪ ತಿಳಿಸಿದರು.