ತೈಲ ಬೆಲೆ ಹೆಚ್ಚಳದಿಂದ ಜನರಿಗೆ ಬರೆ

| Published : Jun 19 2024, 01:06 AM IST

ಸಾರಾಂಶ

ಒಂದು ದೇಶ-ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆ ಹೇರುತ್ತಿವೆ.

ಧಾರವಾಡ:

ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಿಸಿ ಲೀಟ್‌ರಿಗೆ ತಲಾ ₹ 3 ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಹಾಗೂ ಬಸ್ ದರ ಏರಿಕೆಯ ಪ್ರಸ್ತಾವನೆ ಕೈಬಿಡಲು ಅಗ್ರಹಿಸಿ ಮಂಗಳವಾರ ನಗರದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ ಮಾಡಲಾಯಿತು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಮಾತನಾಡಿ, ಇದರಿಂದ ರಾಜ್ಯ ಖಜಾನೆಗೆ ಈ ಆರ್ಥಿಕ ವರ್ಷದಲ್ಲಿ ಸುಮಾರು ₹ 3 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ವಸೂಲಿಯಾಗಲಿದೆ. ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಏರಿಕೆಯಾಗಿ ಬೆಲೆ ಏರಿಕೆಯ ಮೇಲೆ ಸರಣಿ ಪರಿಣಾಮ ಉಂಟಾಗಲಿದೆ. ತರಕಾರಿ, ದವಸ-ಧಾನ್ಯಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಪ್ರತಿ ಲೀಟರ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ತೆರಿಗೆಯೇ ಇದೆ. ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಕೇಂದ್ರ ಬಿಜೆಪಿ ಸರ್ಕಾರವು ಮತದಾರರನ್ನು ಓಲೈಸಲು ₹ 2 ಕಡಿತ ಮಾಡಿತ್ತು. ರಷ್ಯಾ-ಉಕ್ರೇನ್ ಯುದ್ಧದ ಲಾಭ ಪಡೆದು ಕೇಂದ್ರ ಸರ್ಕಾರವು ಜಾಗತಿಕ ದರಕ್ಕಿಂತ ಸುಮಾರು ಶೇ. 35ರಷ್ಟು ಕಡಿಮೆಗೆ ಕಚ್ಚಾ ತೈಲ ಖರೀದಿಸಿದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಲಕ್ಷಾಂತರ ಕೋಟಿ ಹಣವನ್ನು ಭಾರತದ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿದರು.

ಇನ್ನೊಂದೆಡೆ ಒಂದು ದೇಶ-ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆ ಹೇರುತ್ತಿವೆ. ಅದೇ ದಾರಿಯಲ್ಲಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡ ಈ ಜನವಿರೋಧಿ ತೀರ್ಮಾನ ಕೈಗೊಂಡಿದೆ. ಬೆಲೆ ಏರಿಕೆಯ ಕುರಿತು ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಈ ಕ್ರಮವು ಜನರಿಗೆ ಮಾಡಿದ ವಂಚನೆಯಾಗಿದೆ. ಆದ್ದರಿಂದ ತೆರಿಗೆ ಹೆಚ್ಚಳವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಶರಣಬಸವ ಗೋನವಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ, ಸದಸ್ಯರಾದ ಭುವನಾ ಬಳ್ಳಾರಿ, ದೀಪಾ ಧಾರವಾಡ, ಮಧುಲತಾ ಗೌಡರ, ಭವಾನಿಶಂಕರ್ ಗೌಡ ಹಾಗೂ ವಿವಿಧ ಬಡಾವಣೆಗಳ, ಹಳ್ಳಿಗಳ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.