ಸಾರಾಂಶ
ತೊಗರಿ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇಳುವರಿ ಹೆಚ್ಚಿಸಲು ತಾಂತ್ರಿಕತೆ ಅಳವಡಿಸಿಕೊಳ್ಳಬೇಕೆಂದು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.
ವಿಜಯಪುರ : ತೊಗರಿ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇಳುವರಿ ಹೆಚ್ಚಿಸಲು ತಾಂತ್ರಿಕತೆ ಅಳವಡಿಸಿಕೊಳ್ಳಬೇಕೆಂದು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.
ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಬಸಪ್ಪ ಹಣಮಂತ ಹೊಸೂರು ಎಂಬ ಕ್ಷೇತ್ರದಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಧಾರಿತ ತೊಗರಿ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ತೊಗರಿಯನ್ನು ಹೆಚ್ಚಿನ ರೈತರು ಬೆಳೆದಿದ್ದು, ಇಳುವರಿ ಹೆಚ್ಚಳಕ್ಕೆ ಸುಧಾರಿತ ತಳಿಗಳ ಬಳಕೆ, ಅಗಲು ಸಾಲಿನಲ್ಲಿ ನಾಟಿ ಪದ್ಧತಿ, ಸಮಗ್ರ ಪೋಷಕಾಂಶಗಳ ಬಳಕೆ, ಕುಡಿ ಚಿವುಟುವಿಕೆ, ಹೂ ಮತ್ತು ಕಾಯಿಗಳ ಸಂಖ್ಯೆ ಹೆಚ್ಚಿಸಲು ಪಲ್ಸ್ ಮ್ಯಾಜಿಕ ಬಳಕೆ ಇತ್ಯಾದಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಲ್ಲಿ ಇಳುವರಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ ಮಾತನಾಡಿ, ತೊಗರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೀಜೋಪಚಾರ, ಸಮಗ್ರ ಕೀಟ- ರೋಗಗಳ ಹತೋಟಿ ಮಾಡಿದಲ್ಲಿ ಶೇಕಡವಾರು ಇಳುವರಿಯಲ್ಲಿ ಹೆಚ್ಚಳವಾಗುತ್ತದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಎ.ಇನಾಮದಾರ ಮಾತನಾಡಿ, ಈ ಸಲ ವಿಜಯಪುರ ತಾಲೂಕಿನ ರೈತರಿಗೆ ಸುಧಾರಿತ ತಳಿ ತೊಗರಿ ಸಸಿ ತಯಾರಿಸಿ ನಾಟಿ ಮಾಡಿಸಲಾಗಿದೆ. ಸಹಾಯಧನದಲ್ಲಿ ವಿವಿಧ ಪರಿಕರಗಳನ್ನು ವಿತರಿಸಲಾಗಿದೆ. ಬೆಳೆ ಸಮೀಕ್ಷೆ, ಬೆಳೆ ವಿಮೆ ಮಾಡಿಸಲಾಗಿದೆ. ಹೀಗಾಗಿ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲಾಗಿದೆ ಎಂದು ಹೇಳಿದರು.
ಕೃಷಿ ಅಧಿಕಾರಿ ಜೆ.ಬಿ.ದಶವಂತ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮುರುಗಯ್ಯ ಶಿವಯ್ಯ ಮಠಪತಿ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಪ್ಪ ಗಾಣಿಗೇರ, ಸುಭಾಸ ಯಂಭತ್ನಾಳ, ರವಿ ನಾಟೀಕಾರ, ಸೋಮಶೇಖರ ದನಶೆಟ್ಟಿ, ಸಂತೋಷ ಹೊಸೂರು, ಕೃಷಿ ಇಲಾಖೆಯ ಸಂತೋಷ ರಾಠೋಡ, ಮುದಕಣ್ಣ ಯಾಳವಾರ, ಶಿವಾನಂದ ರಾಠೋಡ, ರಾಮು ರಾಠೋಡ ಸೇರಿದಂತೆ ಸುತ್ತಲಿನ ರೈತಭಾಂದವರು ಉಪಸ್ಥಿತರಿದ್ದರು.