ಕ್ರೀಡಾನಿಧಿ ₹ 3ರಿಂದ 5 ಲಕ್ಷಕ್ಕೆ ಹೆಚ್ಚಳ

| Published : Dec 07 2023, 01:15 AM IST

ಸಾರಾಂಶ

ಇಲ್ಲಿನ ಪುರಸಭೆಯ ಸಭಾಭವನದಲ್ಲಿ ಆಡಳಿತಾಧಿಕಾರಿ ಎಚ್.ಬಿ. ಚನ್ನಪ್ಪ ಅಧ್ಯಕ್ಷತೆಯಲ್ಲಿ ಪುರಸಭೆಯ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ ನಡೆಯಿತು.ಕ್ರೀಡಾನಿಧಿ ₹ 3ರಿಂದ 5 ಲಕ್ಷಕ್ಕೆ ಹೆಚ್ಚಳ ಸೇರಿದಂತೆ ಪುರಸಭೆಯ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ವಾಣಿಜ್ಯ, ವಾಣಿಜ್ಯೇತರ ಮತ್ತು ಕೈಗಾರಿಕೆ (ಕೋಲ್ಡ್ ಸ್ಟೋರೇಜ್, ಪೌಡರ್ ಫ್ಯಾಕ್ಟರಿ) ಕಟ್ಟಡ ಸಹಿತ ನಿವೇಶನಗಳಿಗೆ ತೆರಿಗೆ ಆಕರಣೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಕಡ್ಡಾಯ ವಸೂಲಿ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಹಣಕಾಸಿನ ಕೊರತೆ ಆಗದಂತೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ಕನ್ನಡಪ್ರಭ ವಾರ್ತ ಬ್ಯಾಡಗಿ

ಇಲ್ಲಿನ ಪುರಸಭೆಯ ಸಭಾಭವನದಲ್ಲಿ ಆಡಳಿತಾಧಿಕಾರಿ ಎಚ್.ಬಿ. ಚನ್ನಪ್ಪ ಅಧ್ಯಕ್ಷತೆಯಲ್ಲಿ ಪುರಸಭೆಯ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ ನಡೆಯಿತು.

ಕ್ರೀಡಾನಿಧಿ ₹ 3ರಿಂದ 5 ಲಕ್ಷಕ್ಕೆ ಹೆಚ್ಚಳ ಸೇರಿದಂತೆ ಪುರಸಭೆಯ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ವಾಣಿಜ್ಯ, ವಾಣಿಜ್ಯೇತರ ಮತ್ತು ಕೈಗಾರಿಕೆ (ಕೋಲ್ಡ್ ಸ್ಟೋರೇಜ್, ಪೌಡರ್ ಫ್ಯಾಕ್ಟರಿ) ಕಟ್ಟಡ ಸಹಿತ ನಿವೇಶನಗಳಿಗೆ ತೆರಿಗೆ ಆಕರಣೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಕಡ್ಡಾಯ ವಸೂಲಿ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಹಣಕಾಸಿನ ಕೊರತೆ ಆಗದಂತೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ಸದಸ್ಯ ಬಸವರಾಜ ಛತ್ರದ ಮಾತನಾಡಿ, ಪಟ್ಟಣದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಜನಸಂಖ್ಯೆ 40 ಸಾವಿರ ತಲುಪುತ್ತಿದೆ. ಹೀಗಾಗಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಪೂರೈಸಬೇಕಾಗಿದೆ. ಆದರೆ ಎಸ್‌ಎಫ್‌ಸಿ ಸೇರಿದಂತೆ ಇತರ ಅನುದಾನಗಳನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಸ್ಥಳೀಯ ಮಟ್ಟದಲ್ಲೇ ಹಣಕಾಸಿನ ಮೂಲಗಳನ್ನು ಹುಡುಕಿ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಕರ ವಸೂಲಿ ಮಾಡುವ ಕೆಲಸವಾಗಬೇಕಾಗಿದೆ ಎಂದರು.

ಸದಸ್ಯ ಬಾಲಚಂದ್ರ ಪಾಟೀಲ ಮಾತನಾಡಿ, ಪುರಸಭೆ ವ್ಯಾಪ್ತಿಯನ್ನು 5 ಕಿಮೀ ವಿಸ್ತರಿಸುವಂತೆ ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇವಲ ಅರ್ಧ ಕಿಮೀ ಅಂತರದಲ್ಲಿರುವ ವಾಣಿಜ್ಯ, ವಸತಿ ಮತ್ತು ಕೈಗಾರಿಕೆ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಕೆಲವರು ನಮ್ಮ ಆಸ್ತಿಗಳನ್ನು ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಖುದ್ದಾಗಿ ಮನವಿ ಸಲ್ಲಿಸಿದರೂ ಸಹ ತಾಂತ್ರಿಕ ಕಾರಣ ನೆಪವೊಡ್ಡಿ ಕೈಬಿಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸದಸ್ಯ ಈರಣ್ಣ ಬಣಕಾರ ಮಾತನಾಡಿ, ತರೇದಹಳ್ಳಿ, ಮಲ್ಲೂರ ಸೇರಿದಂತೆ ಕನಿಷ್ಠ ಗುಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ಹಳ್ಳದವರೆಗಿನ ಎಲ್ಲಾ ಕಟ್ಟಡಗಳನ್ನು ಪುರಸಭೆಯ ವ್ಯಾಪ್ತಿಗೊಳಪಡುವಂತೆ ಮಾಡಿದಲ್ಲಿ ಆಸ್ತಿಯ ಮೌಲ್ಯವು 10 ಪಟ್ಟು ಹೆಚ್ಚಾಗಲಿದೆ. ಕನಿಷ್ಠ 50 ಲಕ್ಷಕ್ಕೂ ಹೆಚ್ಚು ಆದಾಯ ಪುರಸಭೆಗೆ ಬರಲಿದೆ. ಆದರೆ ಕಟ್ಟಡಗಳ ಮಾಲೀಕರಿಗೆ ಈ ಕುರಿತು ಸಂಪೂರ್ಣ ಮಾಹಿತಿ ಇರದಿರುವ ಕಾರಣ ಇಂದಿಗೂ ಗ್ರಾಪಂಗಳಲ್ಲಿ ತೆರಿಗೆ ಕಟ್ಟುತ್ತಿದ್ದು ಪುರಸಭೆಗೆ ಕಡೆಗೆ ಬರುತ್ತಿಲ್ಲ. ಕೂಡಲೇ ತೆರಿಗೆ ಆಕರಣೆಗೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಸದಸ್ಯ ಸುಭಾಸ ಮಾಳಗಿ ಮಾತನಾಡಿ, ಈ ಬಾರಿಯ ಆಯವ್ಯಯದಲ್ಲಿ ಕ್ರೀಡಾನಿಧಿಯನ್ನು ₹3 ರಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಿ ಬಜೆಟ್‌ನಲ್ಲಿ ಮೀಸಲಿಡಬೇಕು. ತಾಲೂಕಿನಲ್ಲಿ ಸಾಕಷ್ಟು ಉದಯೋನ್ಮುಖ ಕ್ರೀಡಾಪಟುಗಳಿದ್ದಾರೆ ಅವರ ಕ್ರೀಡಾ ಭವಿಷ್ಯಕ್ಕೆ ಇದರಿಂದ ಅನೂಕೂಲವಾಗಲಿದೆ ಎಂದರು. ಇದಕ್ಕೆ ಸರ್ವ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದರು.

ಖಾಲಿಯಿರುವ ವಾಣಿಜ್ಯ ಮಳಿಗೆಗಳು ದರಗಳಲ್ಲಿ ಕಡಿತ, ಮಳಿಗೆ ಬಾಡಿಗೆ ಬಾಕಿ ₹54 ಲಕ್ಷ ವಸೂಲಿ, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಷಿನ್‌ಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಇನ್ನಿತರ ವಿಷಯಗಳ ಚರ್ಚಿಸಲಾಯಿತು.

ಸಭೆಯಲ್ಲಿ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಚಂದ್ರಣ್ಣ ಶೆಟ್ಟರ, ಕಲಾವತಿ ಬಡಿಗೇರ, ಹನುಮಂತ ಮ್ಯಾಗೇರಿ, ಸರೋಜಾ ಉಳ್ಳಾಗಡ್ಡಿ, ಮಂಜಣ್ಣ ಬಾರ್ಕಿ, ಜಮೀಲಾ ಹರ‍್ಕಲ್, ಮೆಹಬೂಬ್ ಅಗಸನಹಳ್ಳಿ, ಗಾಯತ್ರಿ ರಾಯ್ಕರ್, ಕಮಲವ್ವ ಕುರಕುಂದಿ, ವಿನಯ್ ಹಿರೇಮಠ, ಮಹ್ಮದ್‌ರಫೀಕ್ ಮುದಗಲ್, ಕವಿತಾ ಸೊಪ್ಪಿನಮಠ, ರೇಷ್ಮಾಬಾನು ಶೇಖ್, ಮಲ್ಲಮ್ಮ ಪಾಟೀಲ ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.