ಸಾರಾಂಶ
ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಟೆಲಿ ಮನಸನ್ ಆಪ್ತ ಸಮಾಲೋಚಕರೊಂದಿಗೆ ತಮ್ಮ ಭಾವನೆಗಳನ್ನು ಮತ್ತು ಗೊಂದಲಗಳನ್ನು ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 14416 ಕರೆ ಮಾಡಿ ಸಲಹೆ ಪಡೆಯಬಹುದು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಸ್ತುತ ಯುವ ಸಮುದಾಯದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ತಾಲೂಕಿನ ನಗುವಿನಹಳ್ಳಿ ರಾಮ ಮಂದಿರ ದೇವಸ್ಥಾನದ ಆವರಣದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಮಹದೇವಪುರ ಆಯುಷ್ಮಾನ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಸಪ್ತಾಹದಲ್ಲಿ ಮಾತನಾಡಿದರು.
ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡ ಮುಂತಾದ ಕಾರಣಗಳಿಂದ ಜನರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂದರು.ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವವರ ಮನಃ ಪರಿವರ್ತನೆ ಮಾಡಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ‘ಆತ್ಮಹತ್ಯೆ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿ’ ಎಂಬ ಈ ವರ್ಷದ ಘೋಷ ವಾಕ್ಯದೊಂದಿಗೆ ಇಂತಹ ಜಾಗೃತಿ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ ಮಾತನಾಡಿ, ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಟೆಲಿ ಮನಸನ್ ಆಪ್ತ ಸಮಾಲೋಚಕರೊಂದಿಗೆ ತಮ್ಮ ಭಾವನೆಗಳನ್ನು ಮತ್ತು ಗೊಂದಲಗಳನ್ನು ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 14416 ಕರೆ ಮಾಡಿ ಸಲಹೆ ಪಡೆಯಬಹುದು ಎಂದರು.ಸಮುದಾಯ ಆರೋಗ್ಯ ಅಧಿಕಾರಿ ಸಹನಾ, ಆತ್ಮಹತ್ಯೆ ತಡೆಗಟ್ಟುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಲತಾ, ಮುಖಂಡರಾದ ಸೋಮಶೇಖರ್, ಬೋರಯ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿನಯಾ, ಆಶಾ ಕಾರ್ಯಕರ್ತೆಯರಾದ ಎನ್ ಲಕ್ಷ್ಮೀ, ನೇತ್ರಾವತಿ, ಸುಮಾ ಸೇರಿದಂತೆ ಇತರರು ಇದ್ದರು.