ಸಾರಾಂಶ
ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಗತ್ತನ್ನು ಹಸಿರು, ಆರೋಗ್ಯಕರ ಸ್ಥಳವನ್ನಾಗಿ ಮಾಡಲು ಜಗತ್ತಿನಾದ್ಯಂತ ಜನರು ಒಗ್ಗೂಡಬೇಕಿದೆ.
ಹುಬ್ಬಳ್ಳಿ:
ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಸುಂದರ ಪ್ರಕೃತಿಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಕಾರ್ಯವಾಗಬೇಕಿದೆ ಎಂದು ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.ಅವರು ನಗರದ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 100 ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಪರಿಸರ ದಿನವಾದ ಇಂದು ನಮ್ಮ ಸುಂದರ ಭೂಮಿಯನ್ನು ರಕ್ಷಿಸಲು ಮೀಸಲಾದ ದಿನವಾಗಿದೆ. ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಈ ಜಗತ್ತನ್ನು ಹಸಿರು, ಆರೋಗ್ಯಕರ ಸ್ಥಳವನ್ನಾಗಿಸಲು ನಾವೆಲ್ಲರೂ ಒಗ್ಗೂಡಿ ಪರಿಸರ ರಕ್ಷಿಸುವ ಕಾರ್ಯ ಮಾಡಬೇಕಿದೆ.ಇಂದು ಹಲವೆಡೆ ಜನರು ಬೇಜವಾಬ್ದಾರಿಯಿಂದ ಮರ ಕಡಿಯುವುದರಿಂದ ಗರಿಷ್ಠ ಶಾಖದ ಅಲೆಗಳು ಮತ್ತು ವಿಪರೀತ ತಾಪಮಾನದಿಂದಾಗಿ ಹಲವು ರೀತಿಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತು ಪ್ರತಿಯೊಬ್ಬರೂ ಮರ-ಗಿಡ ನೆಡುವ ಮೂಲಕ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಕಾಲೇಜಿನಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ನೂರು ಸಸಿ ಹಚ್ಚುತ್ತಿರುವುದು ಸಂತಸ ತಂದಿದೆ ಎಂದರು. ಇಂದು ನಾವು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾದ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ. ಪ್ಲಾಸ್ಟಿಕ್ ವಸ್ತುಗಳೆ ಇಲ್ಲದ ಭೂಮಿ, ಪರಿಸರವನ್ನು ಕಲ್ಪಿಸಿಕೊಂಡು ನೋಡಿ ಎಷ್ಟು ಸುಂದರವಾದ ಪರಿಸರವಿದೆ ಎಂಬುದು ಗೊತ್ತಾಗಲಿದೆ. ಇಂತಹ ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ನಮ್ಮ-ನಿಮ್ಮೆಲ್ಲರ ಸಹಕಾರ ಅವಶ್ಯವಿದೆ ಎಂದರು.ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸಮಿತಿಯ ಸದಸ್ಯ ಸಂಜೀವ್ ಜೋಶಿ, ಪ್ರಾಂಶುಪಾಲ ಪ್ರಶಾಂತ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹಾವೀರ ಹಾವೇರಿ ಸೇರಿದಂತೆ ಹಲವರಿದ್ದರು.