ಸಾರಾಂಶ
ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂಟಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಅರಣ್ಯ ಇಲಾಖೆ ಆನೆ ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹನೂರು: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂಟಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಅರಣ್ಯ ಇಲಾಖೆ ಆನೆ ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಆಣೆ ಹೊಲ ಹಾಗೂ ಕಿರನ ಹೊಲ, ಕಾಡು ಹೊಲ ವಿವಿಧ ಕುಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆ ರಾತ್ರಿ ಹಗಲು ಎನ್ನದೆ ರೈತರ ಜಮೀನಿಗೆ ನುಗ್ಗಿ ಹಲಸಿನ ಮರ ಹಾಗೂ ತೆಂಗಿನ ಮರ ಇನ್ನಿತರ ಬೆಲೆ ಬಾಳುವ ಮರಗಳನ್ನು ತಿಂದು ತುಳಿದು ನಾಶಗೊಳಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಬರುವುದನ್ನು ತಡೆಗಟ್ಟಲು ವಿಫಲರಾಗಿದ್ದಾರೆ. ಎತ್ತರ ಹಾಗೂ ತಗ್ಗು ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ನಿವಾಸಿಗಳು ಈ ಭಾಗದಲ್ಲಿ ಕಾಡಾನೆ ಮನೆ ಮುಂಭಾಗವೇ ಇರುವ ವಿದ್ಯುತ್ ಕಂಬಗಳ ಬಳಿ ಬರುತ್ತಿದೆ. ತಳಮಟ್ಟದಲ್ಲಿರುವ ವಿದ್ಯುತ್ ತಂತಿ ತಗುಲಿ ಕಾಡಾನೆಗೆ ಅವಗಡ ಸಂಭವಿಸುವ ಮುನ್ನ ದಿನನಿತ್ಯ ಉಪಟಳ ನೀಡುತ್ತಿರುವ ಕಾಡಾನೆಯನ್ನು ಬೇರೆ ಕಡೆ ಬಿಡಲು ಮಲೆಮಾದೇಶ್ವರ ವನ್ಯ ಧಾಮದ ವಲಯದ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಭಾಗದ ನಿವಾಸಿಗಳು ಇದಕ್ಕೆ ಅವರಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರು. ಕ್ರಮ ಕೈಗೊಳ್ಳದೆ ಇರುವುದರಿಂದ ಸಂಘ-ಸಂಸ್ಥೆ ಅವರು ಪತ್ರ ಬರೆದು ಅರಣ್ಯ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ರೈತರು ಹಾಗೂ ಸಂಘ ಸಂಸ್ಥೆಯವರು ಜೊತೆಗೂಡಿ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.