ಸಾರಾಂಶ
ಹುಬ್ಬಳ್ಳಿ: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ಬಿಜೆಪಿಯದ್ದು. ಆದರೆ ಇದರಲ್ಲಿ ಅದು ಯಶಸ್ವಿಯಾಗಲ್ಲ ಎಂದು ವಸತಿ ಸಚಿವ ಜಮೀರ ಅಹಮದ್ ಖಾನ್ ಹೇಳಿದರು.
ಇಲ್ಲಿಯ ಧಾರವಾಡ ಗ್ರಾಮೀಣ ಮತ್ತು ಹು-ಧಾ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 9 ಸ್ಥಾನಗಳನ್ನು ಮಾತ್ರ ಗೆದ್ದಿರಬಹುದು. ಆದರೆ ನಮ್ಮ ಮತಗಳಿಕೆ ಗಣನೀಯವಾಗಿ ಹೆಚ್ಚಿದೆ. ಶೇ.11ರಷ್ಟು ಮತಗಳಿಕೆಯಲ್ಲಿ ಹೆಚ್ಚಾಗಿದೆ. ಇದಕ್ಕೆ ಗ್ಯಾರಂಟಿ ಸ್ಕೀಂಗಳೇ ಕಾರಣ. ಇದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.ಆದಕಾರಣ ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಬೇಕು ಎಂಬ ಯೋಚನೆ ಬಿಜೆಪಿ- ಜೆಡಿಎಸ್‌ನದ್ದು. ಅದಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು. ಆಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಹುದು ಎಂಬ ಹುನ್ನಾರ ಅಡಗಿದೆ ಎಂದರು.ಲೋಕಸಭೆ ಚುನಾವಣೆ ವೇಳೆ ಬಿಜೆಪಿಯವರು ಹೇಳಿದಂತೆ 400 ಸ್ಥಾನ ಗೆದ್ದಿದ್ದರೆ ಸಿಬಿಐ, ಇಡಿ ಬಳಕೆ ಮಾಡಿ ಕಾಂಗ್ರೆಸ್ ಶಾಸಕರನ್ನು ಹೆದರಿಸಿ ಬೆದರಿಸಿ ಖರೀದಿ ಮಾಡುತ್ತಿದ್ದರು. ಆದರೆ, ಅವರಿಗೆ ದೇವರು ಶಿಕ್ಷೆ ಕೊಟ್ಟ. ಬಿಜೆಪಿಯವರು 240 ಸ್ಥಾನಗಳಿಗೆ ಸೀಮಿತಗೊಂಡರು. ಹಾಗಾಗಿ ಅವರು ಸರ್ಕಾರ ಉರುಳಿಸಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ ಅಷ್ಟೇ. ಆದರೆ ಇದರಲ್ಲಿ ಅವರು ಯಶಸ್ವಿಯಾಗಲ್ಲ ಎಂದರು.ಅಲ್ಪಸಂಖ್ಯಾತ ಕಾರ್ಯಕರ್ತರ ಶ್ರಮದಿಂದ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಚುನಾವಣೆ ವೇಳೆ ದುಡಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವುದೇ ಅಧಿಕಾರ, ಸ್ಥಾನ ಮಾನ ಸಿಗುತ್ತಿಲ್ಲ. ಕೇವಲ ಶಿಫಾರಸು ಮೇಲೆ ಹಾಗೂ ಪ್ರಭಾವಿಗಳಿಗೆ ಸ್ಥಾನಮಾನ ನೀಡಿರುವ ಉದಾಹರಣೆಗಳಿವೆ. ಮುಂದೆ ಹೀಗಾಗದಂತೆ ಕ್ರಮ ವಹಿಸಲು ವರಿಷ್ಠರ ಜತೆ ಮಾತನಾಡುತ್ತೇನೆ ಎಂದರು.ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್‌ಗೆ ತಿಳಿಸಿದ್ದೇವೆ ಎಂದು ಹೇಳಿದರು. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಬ್ಬಾರ ಅಹ್ಮದ್, ಜಿಲ್ಲಾಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ ಸನದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಪಾಲಿಕೆ ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ, ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಹೇಂದ್ರ ಸಿಂಘಿ, ಪಾಲಿಕೆ ಸದಸ್ಯರಾದ ಇಕ್ಬಾಲ ನವಲೂರ, ಚೇತನ ಹಿರೇಕೆರೂರ, ಇತರರು ಇದ್ದರು.