ಸಾರಾಂಶ
ರೈತ ಸಮುದಾಯದ ಆರ್ಥಿಕ ಸ್ಥಿತಿ ಸುಧಾರಿಸಲು ಇದು ಸಹಾಯ ಮಾಡುತ್ತದೆ ಮತ್ತು ರಾಷ್ಟ್ರದ ಜಿಡಿಪಿಯ ಮೇಲೆ ನೇರ ಪರಿಣಾಮ ಬೀರುತ್ತದೆ
ಧಾರವಾಡ: ರೈತರು ಮತ್ತು ತಂತ್ರಜ್ಞರ ನಡುವೆ ಹೆಚ್ಚಿನ ಸಂವಹನ ನಡೆದಲ್ಲಿ ಶೈಕ್ಷಣಿಕ ಸಂಸ್ಥೆಗಳು ಶೋಧಿಸಿರುವ ಎಂಜಿನಿಯರಿಂಗ್ ಪರಿಹಾರ ಕಾರ್ಯಗತಗೊಳಿಸಬಹುದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ ಕುಮಾರ ಹೇಳಿದರು.
ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ರೈತರಿಗಾಗಿ ಅಭಿವೃದ್ಧಿಪಡಿಸಿದ ಜೈವಿಕ ಇಂಧನ ಆಧಾರಿತ ಕಾಳು ಒಣಗಿಸುವ ಯಂತ್ರದ ಪ್ರಾತ್ಯಕ್ಷಿಕೆ ಉದ್ಘಾಟಿಸಿದ ಅವರು, ಉತ್ತಮ ಇಳುವರಿ ಮತ್ತು ಉತ್ಪನ್ನಗಳ ಉತ್ತಮ ಮೌಲ್ಯಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಹೊಸ ಉಪಕರಣಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯನ್ನು ಅವರು ತಿಳಿಸಿದರು. ರೈತ ಸಮುದಾಯದ ಆರ್ಥಿಕ ಸ್ಥಿತಿ ಸುಧಾರಿಸಲು ಇದು ಸಹಾಯ ಮಾಡುತ್ತದೆ ಮತ್ತು ರಾಷ್ಟ್ರದ ಜಿಡಿಪಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.ಈ ಉಪಕರಣದ ಪ್ರಧಾನ ಸಂಶೋಧಕ ಡಾ. ಕೆ.ಎನ್. ಪಾಟೀಲ್ ಯೋಜನೆಯ ಬಗ್ಗೆ ವಿವರಿಸಿದರು. ಮತ್ತು ದಕ್ಷ ಕೊಯ್ಲೋತ್ತರ ಪ್ರಕ್ರಿಯೆಗಳಿಗೆ ಬೇಕಾದ ವ್ಯವಸ್ಥೆಗಳ ಅಗತ್ಯವನ್ನು ಮತ್ತು ಉಪಕರಣದ ವಿನ್ಯಾಸ ಮತ್ತು ಫ್ಯಾಬ್ರಿಕೇಷನ್ ವಿವರಗಳನ್ನು ವಿವರಿಸಿದರು.
ಎಸ್‌ಡಿಎ ಇಂಜಿನಿಯರಿಂಗ್ ಕಾಲೇಜು ದತ್ತು ಪಡೆದ ಗ್ರಾಮಗಳಾದ ಕಣವಿ ಹೊನ್ನಾಪುರ, ನಾಯಕನ ಹುಲಿಕಟ್ಟಿ ಮತ್ತು ಯರಿಕೊಪ್ಪದ ರೈತರು ಭಾಗವಹಿಸಿದ್ದರು. ಈ ಕಾಳು ಒಣಗಿಸುವ ಯಂತ್ರದ ಬಳಕೆಗೆ ತಮ್ಮ ಒಲವು ವ್ಯಕ್ತಪಡಿಸಿದರು. ಚಿದಾನಂದ ಪತ್ತಾರ ಇದ್ದರು.ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ ಎಲ್. ಚಕ್ರಸಾಲಿ, ರೈತರು ಕೃಷಿಯ ವಿವಿಧ ಹಂತಗಳಲ್ಲಿ ಎದುರಿಸುವ ತಾಂತ್ರಿಕ ಸಮಸ್ಯೆಗಳಿಗೆ ತಾಂತ್ರಿಕ ಸಂಸ್ಥೆಗಳೊಂದಿಗೆ ಸಂವಹನ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು. ಡಾ. ಎಸ್.ಎಸ್. ಕೆರೂರ ಸ್ವಾಗತಿಸಿದರು, ಡಾ. ಎಸ್.ಎಸ್.ಹೊನ್ನುಂಗರ ವಂದಿಸಿದರು.