ಪುಸ್ತಕ ಓದಿನಿಂದ ಜ್ಞಾನ ವೃದ್ಧಿ: ರಾಮಣ್ಣ

| Published : Jul 15 2024, 01:51 AM IST

ಸಾರಾಂಶ

ಮೊಬೈಲ್ ಮತ್ತು ಟಿವಿ ನೋಡುತ್ತಾ ಕಾಲಕಳೆಯುವುದಕ್ಕಿಂತ ಪುಸ್ತಕ ಓದುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ.

ಪುಸ್ತಕ ಲೋಕಾರ್ಪಣೆ, ವಿದ್ಯಾರ್ಥಿಗಳಿಗಾಗಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಿಮರ್ಶಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮೊಬೈಲ್ ಮತ್ತು ಟಿವಿ ನೋಡುತ್ತಾ ಕಾಲಕಳೆಯುವುದಕ್ಕಿಂತ ಪುಸ್ತಕ ಓದುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದು ಸಾಹಿತಿ, ವಿಮರ್ಶಕ ಡಿ.ರಾಮಣ್ಣ ಅಲ್ಮರ್ಶಿನಕೇರಿ ಹೇಳಿದ್ದಾರೆ.

ತಾಲೂಕಿನ ಅಳವಂಡಿ ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕಸಾಪ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ ಅಳವಂಡಿ ಹೋಬಳಿ ಘಟಕ, ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ, ಸೋನಲ್ ಪ್ರಕಾಶನ ಮಂಡ್ಯ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಯಲ್ಲಪ್ಪ ಹರ್ನಾಳಗಿ ಅವರ ಓದಿದಷ್ಟು ಒಳನೋಟ ಪುಸ್ತಕ ಲೋಕಾರ್ಪಣೆ ಮತ್ತು ವಿದ್ಯಾರ್ಥಿಗಳಿಗಾಗಿ ನಡೆದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಅಂದಾಗ ಮಾತ್ರ ಉತ್ತಮ ಲೇಖನ ಹಾಗೂ ಕವನ ರಚಿಸಲು ಸಾಧ್ಯ. ಜ್ಞಾನಪೀಠ ಪುರಸ್ಕೃತ ಕವಿಗಳಂತೆ ಇಂದಿನ ಯುವ ಕವಿಗಳು ಕನ್ನಡದ ಬಾವುಟವನ್ನು ಎತ್ತರಕ್ಕೆ ಹಾರಿಸಲು ಮುಂದಾಗಬೇಕು. ಜೊತೆಗೆ ಕನ್ನಡತನದ ಬೆಳಕನ್ನು ಪ್ರಪಂಚದಾದ್ಯಂತ ಪಸರಿಸಬೇಕು. ಶಿಕ್ಷಕರು ಬೌದ್ದಿಕವಾಗಿ ಮಕ್ಕಳನ್ನು ವಿಕಾಸ ಮಾಡುವ ಶಕ್ತಿ ಹೊಂದಿದ್ದಾರೆ. ಮಕ್ಕಳು ಸಾಹಿತ್ಯದ ಬಗ್ಗೆ ಒಡನಾಟ ಇಟ್ಟುಕೊಳ್ಳಬೇಕು ಹಾಗೂ ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಎ.ಟಿ. ಕಲ್ಮಠ ಮಾತನಾಡಿದರು.

ಉಪನ್ಯಾಸಕ ನವೀನ ಇನಾಮದಾರ ವಾಚನ ಮಾಡಿದ ಕವಿತೆಗಳ ಬಗ್ಗೆ ವಿಮರ್ಶೆ ಮಾಡಿದರು. ಕಸಾಪ ತಾಲೂಕಾ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಹಾಗೂ ಸಾಹಿತಿ ಯಲ್ಲಪ್ಪ ಹರ್ನಾಳಗಿ, ಕಿರಣಕುಮಾರ ಅಂಗಡಿ, ನೀಲಪ್ಪ ಹಕ್ಕಂಡಿ ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಹಾಗೂ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದರು. ೧೩ ವಿದ್ಯಾರ್ಥಿಗಳು ಕವನ ವಾಚನ ಮಾಡಿದರು. ನಂತರ ಅವರನ್ನು ಶಾಲು ಹಾಕಿ ಪುಸ್ತಕ ನೀಡಿ ಸನ್ಮಾನಿಸಲಾಯಿತು.

ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಉಪನ್ಯಾಸಕ ಎಚ್. ಮಹಾನಂದಿ, ಸಿದ್ದು ಅಂಗಡಿ, ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಪ್ರಮುಖರಾದ ಜುನುಸಾಬ, ಯುವ ಸಾಹಿತಿಗಳಾದ ಸಂಗೀತಾ, ಅಮೃತಾ, ಕವಿತಾ, ಶ್ರೀಧರ, ನಂದೀಶ, ಲೀಲಾವತಿ, ರುದ್ರಮ್ಮ, ದೀಪಾ, ಮಲ್ಲಮ್ಮ, ಸುನೀತಾ, ಸಹನಾ, ಕಾವೇರಿ ಹಾಗೂ ಇತರರು ಇದ್ದರು.