ಬಸ್‌ ಸಂಖ್ಯೆ ಹೆಚ್ಚಿಸಿ: ವಿದ್ಯಾರ್ಥಿಗಳ ಪ್ರತಿಭಟನೆ

| Published : Jun 27 2024, 01:11 AM IST / Updated: Jun 27 2024, 01:12 AM IST

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರ ಪ್ರದೇಶಗಳಿಗೆ ಬರುತ್ತಾರೆ. ತರಗತಿಗಳು ಪ್ರಾರಂಭವಾದ ನಂತರ ಸಕಾಲಕ್ಕೆ ಬಸ್‌ಪಾಸ್ ವಿತರಿಸದೆ ಇರುವುದರಿಂದ ನಿತ್ಯ ನೂರಾರು ರುಪಾಯಿ ವ್ಯಯಿಸಿ ಖಾಸಗಿ ವಾಹನಗಳಲ್ಲಿ ತರಗತಿಗೆ ಬರಬೇಕಿದೆ.

ಹುಬ್ಬಳ್ಳಿ:

ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಬಸ್‌ಪಾಸ್ ವಿತರಣೆ ಹಾಗೂ ಬಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಲ್ಲಿನ ಹೊಸೂರು ಬಸ್‌ ನಿಲ್ದಾಣದ ಎದುರು ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರ ಪ್ರದೇಶಗಳಿಗೆ ಬರುತ್ತಾರೆ. ತರಗತಿಗಳು ಪ್ರಾರಂಭವಾದ ನಂತರ ಸಕಾಲಕ್ಕೆ ಬಸ್‌ಪಾಸ್ ವಿತರಿಸದೆ ಇರುವುದರಿಂದ ನಿತ್ಯ ನೂರಾರು ರುಪಾಯಿ ವ್ಯಯಿಸಿ ಖಾಸಗಿ ವಾಹನಗಳಲ್ಲಿ ತರಗತಿಗೆ ಬರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಬ್ಬಂದಿ ಕೊರತೆಯಿಂದ ಬಸ್‌ಪಾಸ್‌ ವಿತರಣೆಯಲ್ಲಿ ವಿಳಂಬವಾಗುತ್ತದೆ. ತಕ್ಷಣ ಸರ್ಕಾರ ಅಗತ್ಯ ಸಿಬ್ಬಂದಿ ನಿಯೋಜಿಸುವ ಮೂಲಕ ಶಾಲಾ-ಕಾಲೇಜು ಆರಂಭವಾದ ತಕ್ಷಣ ಬಸ್‌ಪಾಸ್‌ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿ ಬಹಳಷ್ಟು ವ್ಯತ್ಯಾಸವಿದ್ದು, ಅವುಗಳ ವೇಳಾಪಟ್ಟಿಗೆ ಅನುಗುಣವಾಗಿ ಬಸ್‌ಪಾಸ್ ವಿತರಿಸಬೇಕು ಎಂದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಆದರೆ, ಅದಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಕೆಲವೆಡೆ ವಿದ್ಯಾರ್ಥಿಗಳನ್ನು ನೋಡಿದ ತಕ್ಷಣ ಬಸ್‌ ನಿಲ್ಲಿಸದೆ ಹೋದ ಪ್ರಕರಣಗಳು ನಡೆದಿದೆ. ಜೀವಭಯದಲ್ಲಿ ವಿದ್ಯಾರ್ಥಿಗಳು ಬಸ್‌ ಪುಟ್‌ಬೋರ್ಡ್‌ನಲ್ಲಿ ಬರಬೇಕಿದೆ. ಆದರಿಂದ ತಕ್ಷಣ ಸರ್ಕಾರ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಎಬಿವಿಪಿ ಕಾರ್ಯದರ್ಶಿ ಸಚಿನ್‌ ಕುಳಗೇರಿ ಸೇರಿದಂತೆ ಪದಾಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.