ಕ್ರೀಡೆಯಿಂದ ದೈಹಿಕ, ಬೌದ್ಧಿಕ ಶಕ್ತಿ ವೃದ್ಧಿ: ಸಂತೋಷ ಪಾಟೀಲ

| Published : Oct 02 2024, 01:00 AM IST

ಸಾರಾಂಶ

ಇಡೀ ಗ್ರಾಮದ ಜನರು ಸೇರಿಕೊಂಡು ಕ್ರೀಡಾಕೂಟವನ್ನು ಹಬ್ಬದ ವಾತಾವರಣದಂತೆ ನಿರ್ಮಾಣ ಮಾಡಿರುವುದು ಶಾಲಾ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ.

ಯಲಬುರ್ಗಾ-ಕುಕನೂರು ಅವಳಿ ತಾಲೂಕಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಮಂಗಳವಾರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಡೆದ ಯಲಬುರ್ಗಾ-ಕುಕನೂರು ಅವಳಿ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಕೂಟದಲ್ಲಿ ನಿರ್ಣಾಯಕರು ನೀಡುವ ತೀರ್ಪುಗಳನ್ನು ಕ್ರೀಡಾಪಟುಗಳು ಶ್ರದ್ಧೆಯಿಂದ ಸ್ವೀಕರಿಸಿ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಈ ಗ್ರಾಮದ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಹೋಗಿದ್ದಾರೆ. ಹೀಗಾಗಿ ಗ್ರಾಮದ ಜನರು ಕ್ರೀಡಾಕೂಟಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಇಡೀ ಗ್ರಾಮದ ಜನರು ಸೇರಿಕೊಂಡು ಕ್ರೀಡಾಕೂಟವನ್ನು ಹಬ್ಬದ ವಾತಾವರಣದಂತೆ ನಿರ್ಮಾಣ ಮಾಡಿರುವುದು ಶಾಲಾ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ತಹಸೀಲ್ದಾರ ಬಸವರಾಜ ತೆನ್ನಳ್ಳಿ ಕ್ರೀಡಾಜ್ಯೋತಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಅತ್ಯವಶ್ಯಕವಾಗಿದೆ ಎಂದರು.

ಕ್ರೀಡಾಧ್ವಜ ನೇರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಮಾತನಾಡಿ, ಕ್ರೀಡೆಯೂ ಮಕ್ಕಳಲ್ಲಿ ಆತ್ಮವಿಶ್ವಾಸ, ಚೈತನ್ಯ ತುಂಬುತ್ತದೆ. ಕ್ರೀಡೆ ಜೊತೆಗೆ ಕಲೆ, ಸಂಗೀತ, ಸಾಹಿತ್ಯದಲ್ಲೂ ಸದಾ ಅಭಿರುಚಿಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆದರ್ಶ ವಿದ್ಯಾರ್ಥಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಕಳಕಪ್ಪ ವೀರಾಪೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮದ ಮುಖಂಡರಾದ ಅಂದಪ್ಪ ಸುಬೇದಾರ, ರಾಯಪ್ಪ ಮಾಡ್ಲಗೇರಿ, ಗುರಪ್ಪ ಅಂಗಡಿ, ಶಂಕ್ರಪ್ಪ ಹೊಟ್ಟಿನ್, ಮಹಾಂತೇಶ ಗಾಣಿಗೇರ, ಉಭಯ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ನಿಂಗಪ್ಪ ದೇವರಗುಡಿ, ಬಸವರಾಜ ರಾಮಶೆಟ್ಟಿ, ಬಿಸಿಯೂಟ ಅಧಿಕಾರಿ ಟಿ.ಜೆ. ದಾನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೈ.ಜಿ.ಪಾಟೀಲ, ಮಹೇಶ ಸಬರದ, ಎಸ್.ವ್ಹಿ. ಧರಣಾ, ಮಾರುತಿ ತಳವಾರ, ಅಶೋಕ ಮಾಲಿಪಾಟೀಲ, ವೀರಭದ್ರಪ್ಪ ಅಂಗಡಿ ಹಾಗೂ ಗ್ರಾಪಂ ಸರ್ವಸದಸ್ಯರು ಮತ್ತಿತರರು ಇದ್ದರು.