ಪಿಎಂಎವೈ ಆರ್ಥಿಕ ನೆರವು ಹೆಚ್ಚಿಸಿ: ಕಡಾಡಿ

| Published : Dec 05 2024, 12:31 AM IST

ಸಾರಾಂಶ

ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ನಿರ್ಮಾಣ ವೆಚ್ಚದಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀಡಲಾಗುವ ಆರ್ಥಿಕ ನೆರವನ್ನು₹ 2 ಲಕ್ಷಕ್ಕೆ ಹೆಚ್ಚಿಸುವುದು ಅಗತ್ಯವಿದೆ ಎಂದು ಸಂಸತ್ತಿನ ಚಳಿಗಾಲ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 2 ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಘೋಷಿಸಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹೊಸ ಕುಟುಂಬಗಳ ವಸತಿ ಅಗತ್ಯಗಳನ್ನು ಪೂರೈಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಶ್ಲಾಘಿಸಿದರು.

ಕಳೆದ 10 ವರ್ಷಗಳಲ್ಲಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅಡಿಯಲ್ಲಿ 2.64 ಕೋಟಿ ಗ್ರಾಮೀಣ ಮನೆ ನಿರ್ಮಿಸಲಾಗಿದೆ, ಆದರೆ, 2014 ರ ಮೊದಲು 29 ವರ್ಷಗಳಲ್ಲಿ ಇಂದಿರಾ ಆವಾಸ್ ಯೋಜನೆ ಮೂಲಕ ಕೇವಲ 3.25 ಕೋಟಿ ಮನೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್.ಡಿ.ಎ ಸರ್ಕಾರ ಗ್ರಾಮೀಣ ವಸತಿ ಯೋಜನೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣದಲ್ಲಿ ಕನಿಷ್ಠ ವಿಸ್ತೀರ್ಣವನ್ನು 20 ಚದರ ಮೀಟರ್ ನಿಂದ 25 ಚದರ ಮೀಟರ್‌ಗೆ ಹೆಚ್ಚಿಸಲಾಗಿದೆ. ಅಲ್ಲದೆ, ಪ್ರತಿ ಯೂನಿಟ್ ಸಹಾಯಧನವನ್ನು ಸಾಮಾನ್ಯ ಪ್ರದೇಶಗಳಲ್ಲಿ ₹ 70,000 ರಿಂದ ₹1.20 ಲಕ್ಷಕ್ಕೆ ಮತ್ತು ಗುಡ್ಡಗಾಡು/ಕಠಿಣ ಪ್ರದೇಶಗಳಲ್ಲಿ ₹.75,000 ರಿಂದ ₹ 1.30 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮತ್ತು ಗ್ರಾಮೀಣ ಬಡವರಿಗೆ ಹೆಚ್ಚು ಪ್ರಯೋಜನವಾಗುವ ಹಿನ್ನಲೆಯಲ್ಲಿ ಸಹಾಯಧನದ ಮೊತ್ತವನ್ನು ಕನಿಷ್ಠ ₹2 ಲಕ್ಷ ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸದನದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.