ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ನೇತೃತ್ವದಲ್ಲಿ ನಿಗಮದ ನೌಕರರು, ಕಾರ್ಮಿಕರು ನಗರದ ಹೊಸ ಬಸ್ ನಿಲ್ದಾಣದ ಬಳಿ ಗುರುವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.ನಗರದ ನಿರ್ಮಾಣ ಹಂತದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಫೆಡರೇಷನ್ ಅಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಇತರರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಘೋಷಣೆಗಳ ಕೂಗಿದ ಪ್ರತಿಭಟನಾನಿರತರು ನಂತರ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಮುಖಾಂತರ ಸರ್ಕಾರ, ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಆವರಗೆರೆ ಎಚ್.ಜಿ.ಉಮೇಶ, ಸಂಸ್ಥೆಯ ನೌಕರರಿಗೆ ಮೂಲ ವೇತನಕ್ಕೆ 2023ರ ಡಿ.31ರ ಮೂಲ ವೇತನದ ಶೇ.25ರಷ್ಟು ಹೆಚ್ಚಿಸಿ, ವೇತನ ಶ್ರೇಣಿ ಸಿದ್ಧಪಡಿಸಬೇಕು. ಇನ್‌ಕ್ರಿಮೆಂಟ್ ದರ ಎಲ್ಲಾ ಹಂತದಲ್ಲೂ ಮೂಲ ವೇತನದ ಶೇ.4 ಇರಬೇಕು. ಜನವರಿ 2020ರಿಂದ ಆಗಿರುವ ಶೇ.15ರ ವೇತನ ಹೆಚ್ಚಳದ 38 ತಿಂಗಳ ಬಾಕಿ ವಿಳಂಬ ಇಲ್ಲದೇ, ಪಾವತಿಸಬೇಕು. 1.1.2020ರಿಂದ 28.2.2023ರ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ವಿಮುಕ್ತಿಯಾದ ಎಲ್ಲಾ ನೌಕರರಿಗೆ ನಿವೃತ್ತಿ, ಮೃತರು, ವಜಾಗೊಂಡವರು, ಇತರೆ ಕಾರಣಕ್ಕೆ ಸೇವೆಯಿಂದ ನಿರ್ಗಮಿಸಿದ ಎಲ್ಲಾ ನೌಕರರಿಗೆ 1.1.2020ರಿಂದ ಜಾರಿ ಮಾಡಿದ ವೇತನ ಶ್ರೇಣಿ ಅನ್ವಯಿಸಿ, ಎಲ್ಲಾ ರೀತಿಯ ಆರ್ಥಿಕ ನೆರವು, ಗ್ರಾಚ್ಯುಟಿ, ಪಿಎಫ್, ರಜಾ ನಗದೀಕರಣ ಇತರೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿ ಸಿದ್ಧಪಡಿಸಬೇಕು. ಆಯ್ಕೆ ಶ್ರೇಣಿಯ ವಾರ್ಷಿಕ ವೇತನ ಬಡ್ತಿ ಹಾಗೂ ಉನ್ನತ ಶ್ರೇಣಿಗಳ ವಾರ್ಷಿಕ ವೇತನ ಬಡ್ತಿಯು ಆಯಾ ವೇತನ ಶ್ರೇಣಿಯ ಮೂಲ ವೇತನದ ಶೇ.4 ಇರಬೇಕು. ಆಯ್ಕೆ ಶ್ರೇಣಿ ಬಡ್ಡಿ ಸೇವಾವದಿಯ ಪ್ರತಿ 10 ವರ್ಷಕ್ಕೊಮ್ಮೆ ನೀಡಬೇಕು. ಯಾವುದೇ ಸಂದರ್ಭದಲ್ಲೂ ಆಯ್ಕೆ ಶ್ರೇಣಿ, ಉನ್ನತ ಶ್ರೇಣಿ ವಾರ್ಷಿಕ ಬಡ್ತಿಯ ಸಾಮಾನ್ಯ ಶ್ರೇಣಿಯ ಕೊನೆಯ ಹಂತದ ವಾರ್ಷಿಕ ವೇತನ ಬಡ್ತಿಯ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರಬೇಕು. ಎಲ್ಲಾ ನೌಕರರಿಗೆ ಪಾಳಿ ವ್ಯವಸ್ಥೆ ಜಾರಿಗೊಳ್ಳಬೇಕು ಎಂದು ಒತ್ತಾಯಿಸಿದರು.
ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಬೇಕು. ಮಹಿಳಾ ನೌಕರರಿಗೆ ಘಟಕ, ಬಸ್ ನಿಲ್ದಾಣ, ಟರ್ಮಿನಲ್‌ಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯಗಳ ವ್ಯವಸ್ಥೆ, ಕುಡಿಯುವ ನೀರು, ಘಟಕಗಳಲ್ಲಿ ಶಿಶುಪಾಲನಾ ಕೇಂದ್ರಗಳ ವ್ಯವಸ್ಥೆ ಮಾಡಬೇಕು. ಮಹಿಳಾ ನೌಕರರಿಗೆ ಆಯಾ ನೌಕರ ಆಯ್ಕೆಯ ಪ್ರಕಾರ ಉತ್ತಮ ಗುಣಮಟ್ಟದ ಸೀರೆ ಅಥವಾ ಡ್ರೆಸ್ ಮೆಟಿರಿಯಲ್ ಒದಗಿಸಬೇಕು. ಎಲ್ಲಾ ನೌಕರರಿಗೂ ಸೂಕ್ತ ತುಟ್ಟಿ ಭತ್ಯೆಗೆ ಲಗತ್ತಾದ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಗುತ್ತಿಗೆ ಆಧಾರದಲ್ಲಿರುವ ಚಾಲಕ, ತಾಂತ್ರಿಕ ಸಿಬ್ಬಂದಿಯ ಸಂಸ್ಥೆ ನೌಕರರಾಗಿ ನೇಮಿಸಬೇಕು. ವೇತನ ಪರಿಷ್ಕರಣೆ 4 ವರ್ಷ ಕಾಲ ಜಾರಿ ಇರಬೇಕು. 4 ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಎಲ್ಲಾ ನಿಗಮಗಳಲ್ಲೂ ನೌಕರ ಮುಂಬಡ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಮಿರ್ಜಾ ರೆಹಮತ್ತುಲ್ಲಾ, ಪ್ರಕಾಶ, ಉಬೇದುಲ್ಲಾ, ಆನಂದ ನಾಯ್ಕ, ಹನುಮಂತಪ್ಪ, ಹರಿಹರದ ಕರಿಗೌಡ, ಈಶ್ವರ, ಬಣವಿ ಲೋಕಪ್ಪ ಸೇರಿ ಜಂಟಿ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರಿದ್ದರು.