ರೈತರಿಗೆ ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ದೊರೆಯಬೇಕಾದರೆ ಸಕ್ಕರೆ ದರ ಹೆಚ್ಚಿಸುವುದರ ಜತೆಗೆ ಕಬ್ಬಿನಿಂದ ಉತ್ಪಾದನೆಯಾಗುವ ಎಥನಾಲ್ ಹಾಗೂ ಮೊಲಾಸಿಸ್ ಖರೀದಿಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರೈತರಿಗೆ ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ದೊರೆಯಬೇಕಾದರೆ ಸಕ್ಕರೆ ದರ ಹೆಚ್ಚಿಸುವುದರ ಜತೆಗೆ ಕಬ್ಬಿನಿಂದ ಉತ್ಪಾದನೆಯಾಗುವ ಎಥನಾಲ್ ಹಾಗೂ ಮೊಲಾಸಿಸ್ ಖರೀದಿಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಸೋಮವಾರ ನಗರದ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಆಗಮಿಸಿದ ವೇಳೆ ರೈತರ ಹೋರಾಟ ಹಾಗೂ ಕಬ್ಬಿನ ಬೆಲೆ ಸಮಸ್ಯೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದರು. ರೈತರ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಜವಾಬ್ದಾರಿಯಿದೆ. ಕಬ್ಬಿನಿಂದ ಉತ್ಪಾದನೆಯಾಗುವ ಎಥನಾಲ್ ಖರೀದಿಗೆ ನಿರ್ಬಂಧ ವಿಧಿಸುವುದು ಹಾಗೂ ಜೋಳದಿಂದ ಉತ್ಪಾದಿಸುವ ಎಥನಾಲ್‌ನ ಪ್ರತಿ ಲೀಟರ್‌ಗೆ ಮೂರು ರೂಪಾಯಿ ದರ ಕಡಿತಗೊಳಿಸುವುದರಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಕ್ಕರೆಗೆ ಕನಿಷ್ಠ ₹50ರಿಂದ ₹55ರವರೆಗೆ ದರ ನಿಗದಿಪಡಿಸಬೇಕು. ಬಡವರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮೂಲಕ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಸಕ್ಕರೆ ಒದಗಿಸಬಹುದು. ಆದರೆ ಬಡವರಿಗೆ ಸಕ್ಕರೆ ನೀಡುವ ನೆಪದಲ್ಲಿ ರೈತರಿಗೆ ನ್ಯಾಯಯುತ ಬೆಲೆ ನಿರಾಕರಿಸಬಾರದು ಎಂದು ಒತ್ತಾಯಿಸಿದರು.

ಒಂದು ಕಿಲೋ ಸಿಹಿ ಪದಾರ್ಥ ತಯಾರಿಸಲು ₹500ರಿಂದ ₹600ರವರೆಗೆ ದರ ಪಡೆಯುತ್ತಾರೆ. ಅದರಲ್ಲಿ ಸಕ್ಕರೆಯ ವೆಚ್ಚ ಕಡಿಮೆ ಪ್ರಮಾಣದಲ್ಲಿರುವುದರಿಂದ ಸಕ್ಕರೆ ದರ ಹೆಚ್ಚಳದಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬ ವಾದ ಸರಿಯಲ್ಲ ಎಂದವರು ತಿಳಿಸಿದರು.

ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯಬೇಕಾದರೆ ಸಕ್ಕರೆ ಮಾರುಕಟ್ಟೆ ದರ ಹೆಚ್ಚಿಸುವುದು ಅಗತ್ಯ. ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಮೊಲಾಸಿಸ್‌ನಿಂದಲೂ ಎಥನಾಲ್ ಉತ್ಪಾದಿಸಲಾಗುತ್ತದೆ. ಅದನ್ನೂ ಖರೀದಿಸದಿದ್ದರೆ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರ ಆರ್ಥಿಕ ಸ್ಥಿತಿಗೆ ತೊಂದರೆಯಾಗುತ್ತದೆ. ಹೀಗಾಗಿ ಎಥನಾಲ್ ಮತ್ತು ಮೊಲಾಸಿಸ್ ಖರೀದಿಗೆ ಅನುಕೂಲಕರ ನೀತಿ ರೂಪಿಸಿ, ರೈತರ ಹಿತ ಕಾಪಾಡಬೇಕು ಎಂದು ಯತ್ನಾಳ ಒತ್ತಾಯಿಸಿದರು.

ಬ್ಲಾಕ್ ಮೇಲ್‌ ಮಾಡೋರಿಗೆ ಶಿಕ್ಷೆಯಾಗಲಿ:ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಅವರು, ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ರಾಜಕೀಯ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡುವವರಿಗೆ ಸೂಕ್ತ ಶಿಕ್ಷೆಯಾಗಬೇಕು. ಇಂತಹ ಕೃತ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬ್ಲ್ಯಾಕ್‌ಮೇಲ್ ಪ್ರವೃತ್ತಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು.