ಸಾರಾಂಶ
ಪ್ರಸಕ್ತ ಮಾರುಕಟ್ಟೆ ದರ ಮತ್ತು ತೋಟಗಾರಿಕೆ ಇಲಾಖೆಯ ಖರ್ಚು ಅಂದಾಜಿನ ಆಧಾರದ ಮೇಲೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಅಧಿಕಾರಿಗಳಿಗೆ ತಿಪಟೂರಿನ ಸದೃಢ ಫೌಂಡೇಶನ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ಪ್ರಸಕ್ತ ಮಾರುಕಟ್ಟೆ ದರ ಮತ್ತು ತೋಟಗಾರಿಕೆ ಇಲಾಖೆಯ ಖರ್ಚು ಅಂದಾಜಿನ ಆಧಾರದ ಮೇಲೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಅಧಿಕಾರಿಗಳಿಗೆ ತಿಪಟೂರಿನ ಸದೃಢ ಫೌಂಡೇಶನ್ ವತಿಯಿಂದ ಮನವಿ ಸಲ್ಲಿಸಲಾಯಿತು. ತಿಪಟೂರಿಗೆ ಸಿಎಸಿಪಿ ಅಧಿಕಾರಿಗಳ ತಂಡ ಭೇಟಿ ನೀಡಿದ್ದ ಸಂದರ್ಭದಲ್ಲಿ ಸದೃಢ ಫೌಂಡೇಶನ್ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದ ಅಧ್ಯಕ್ಷ ಭೋಜರಾಜು, 2026ನೇ ಕೃಷಿ ಸಾಲಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರಸ್ತುತ ಮಾರುಕಟ್ಟೆ ಸ್ಥಿತಿಗತಿ ಮತ್ತು ತೋಟಗಾರಿಕೆ ಇಲಾಖೆಯ ಖರ್ಚು ಅಂದಾಜಿನ ಆಧಾರದ ಮೇಲೆ ಪರಿಷ್ಕರಿಸಬೇಕು. ಕೊಬ್ಬರಿ ಬೆಲೆ ಪ್ರತಿ ಕ್ವಿಂಟಾಲ್‌ಗೆ ರು. 28ಸಾವಿರದಿಂದ ರು. 31ಸಾವಿರದವರೆಗೆ ಇದ್ದು, ತೋಟಗಾರಿಕೆ ಇಲಾಖೆ ನೀಡಿದ ಅಂಕಿ ಅಂಶಗಳ ಪ್ರಕಾರ ಕಾರ್ಮಿಕ ದರ, ಕೀಟನಾಶಕ, ನೀರಿನ ಅಭಾವ ಇತ್ಯಾದಿ ಕಾರಣಗಳಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಆದರೆ ಇಂತಹ ವಾಸ್ತವಿಕ ಪರಿಸ್ಥಿತಿಗಳ ನಡುವೆಯೂ ಪ್ರಸ್ತುತ ನೀಡಲಾಗುತ್ತಿರುವ ಕನಿಷ್ಠ ಬೆಂಬಲ ಬೆಲೆ ಈ ವೆಚ್ಚಗಳನ್ನು ಸರಿದೂಗಿಸುತ್ತಿಲ್ಲ. ಭದ್ರವಾದ ಖರೀದಿ ವ್ಯವಸ್ಥೆಯ ಕೊರತೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ನಷ್ಟದ ಬೆಲೆಯಲ್ಲಿ ಮಾರಲು ನಿರ್ಬಂಧಿತರಾಗುತ್ತಿದ್ದಾರೆ. ರಸಗೊಬ್ಬರ, ನೀರಾವರಿ, ಕಾರ್ಮಿಕ ವೆಚ್ಚಗಳು ಹೆಚ್ಚಾಗಿದ್ದು, ಹವಾಮಾನ ವೈಪರಿತ್ಯ ಮತ್ತು ಕೀಟರೋಗಗಳಿಂದ ಇಳುವರಿಯಲ್ಲೂ ಕುಸಿತ ಉಂಟಾಗಿದೆ. ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸು ಪ್ರಕಾರ ಸಂಪೂರ್ಣ ವೆಚ್ಚದ ಮೇಲೆ ಕನಿಷ್ಠ 50ರಷ್ಟು ಲಾಭವಿದ್ದರೆ ಮಾತ್ರ ಕನಿಷ್ಠ ಬೆಂಬಲ ಬೆಲೆ ಸರಿಯಾದ ಮಟ್ಟದಲ್ಲಿದೆ ಎಂದು ಪರಿಗಣಿಸಬೇಕು. ಮಿಲ್ಲಿಂಗ್ ಕೊಬ್ಬರಿಗೆ ಕನಿಷ್ಠ ರೂ.25ಸಾವಿರ ಪ್ರತಿ ಕ್ವಿಂಟಾಲ್ ಮತ್ತು ಉಂಡೆ ಕೊಬ್ಬರಿಗೆ ಮಿಲ್ಲಿಂಗ್ ಕೊಬ್ಬರಿಗಿಂತ ಹೆಚ್ಚಿನ ಬೆಲೆ ನಿಗದಿಪಡಿಸಬೇಕು. ನಫೆಡ್ ಮತ್ತು ರಾಜ್ಯ ಸಹಕಾರ ಸಂಘಗಳು ಕನಿಷ್ಠ ಬೆಂಬಲ ಬೆಲೆ ಖರೀದಿ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು. ಬೆಂಬಲ ಬೆಲೆ ನಿಗದಿಯಾದರೆ ಮಾತ್ರ ಕೊಬ್ಬರಿ ಕೃಷಿಯ ಹಿತಾಸಕ್ತಿ ರಕ್ಷಣೆಗೊಳ್ಳಲಿದೆ ಎಂದು ತಂಡದ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.