ಸಾರಾಂಶ
ಗಣತಿಯಲ್ಲಿ ಬಿಟ್ಟುಹೋದ ಮಾಜಿ ದೇವದಾಸಿಯರನ್ನು ಗಣತಿ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಬಳ್ಳಾರಿಮಾಜಿ ದೇವದಾಸಿಯರಿಗೆ ಮಾಸಿಕ ಸಹಾಯಧನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಾಜಿ ದೇವದಾಸಿಯರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಈ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕನಿಷ್ಠ ಸೌಕರ್ಯಗಳಿಲ್ಲದೆ ಬದುಕುತ್ತಿರುವ ಕುರಿತು ಈಗಾಗಲೇ ಅನೇಕ ಬಾರಿ ಹೋರಾಟ ಮಾಡಿ ರಾಜ್ಯ ಸರ್ಕಾರದ ಗಮನಕ್ಕೆ ತಂದಾಗ್ಯೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಾಜಿ ದೇವದಾಸಿಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಬೇಕಾದ ನೆರವು ಸರ್ಕಾರದಿಂದ ಸಿಗುತ್ತಿಲ್ಲ. ದಲಿತರಿಗೆ ಭೂಮಿ ನೀಡುವ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ. ನಿರಂತರ ಹೋರಾಟಗಳ ಫಲದಿಂದ ಮಾಜಿ ದೇವದಾಸಿಯರಿಗೆ ಪ್ರತಿ ತಿಂಗಳು ₹1500 ಸಹಾಯಧನ ನೀಡಲಾಗುತ್ತಿದೆ. ಆದರೆ, ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಬೆಲೆ ಏರಿಕೆಗಳ ನಡುವೆ ಜೀವನ ನಿರ್ವಹಣೆಗೆ ಒದ್ದಾಡುತ್ತಿರುವ ದೇವದಾಸಿಯರಿಗೆ ಕನಿಷ್ಠ ₹5 ಸಾವಿರಗಳವರೆಗೆ ಸಹಾಯಧನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಗಣತಿಯಲ್ಲಿ ಬಿಟ್ಟುಹೋದ ಮಾಜಿ ದೇವದಾಸಿಯರನ್ನು ಗಣತಿ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ಮಾಜಿ ದೇವದಾಸಿಯರು, ಮಕ್ಕಳು ಹಾಗೂ ಕುಟುಂಬ ಸದಸ್ಯರ ಗಣತಿ ಮಾಡಿ, ಪುನರ್ವಸತಿ ಕಲ್ಪಿಸಬೇಕು. ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ಮಹಿಳೆಯರಿಗೆ ತಲಾ 5 ಎಕರೆ ನೀರಾವರಿ ಜಮೀನು ನೀಡಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷೆ ಅಂಜಿನಮ್ಮ ಹಾಗೂ ದುರುಗಮ್ಮ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಸಂಘಟನೆಯ ಜಿಲ್ಲಾ ಸಮಿತಿಯ ಮಾಳಮ್ಮ, ಹನುಮಕ್ಕ, ಸಿದ್ದಮ್ಮ, ಗೂಳಮ್ಮ, ಹುಲುಗಮ್ಮ ಭಾಗವಹಿಸಿದ್ದರು. ಬೇಡಿಕೆಯ ಮನವಿಪತ್ರವನ್ನು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಯಿತು.