ನಿಸ್ವಾರ್ಥ ಸೇವೆಯಿಂದ ಬದುಕಿನ ಮೌಲ್ಯ ವೃದ್ಧಿ: ಶಾಸಕ ತುನ್ನೂರು

| Published : Jul 12 2024, 01:35 AM IST

ಸಾರಾಂಶ

ಪ್ರತಿಯೊಬ್ಬರಿಗೂ ಭಗವಂತ ನಿಸರ್ಗದತ್ತವಾಗಿ ಅವರವರ ಕ್ಷೇತ್ರವನ್ನು ನಿಗದಿಪಡಿಸಿರುತ್ತಾನೆ. ಯಾರು ಆ ಕ್ಷೇತ್ರದಲ್ಲಿ ಉತ್ಸಾಹದಿಂದ, ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಂಡು ನಿಸ್ವಾರ್ಥದಿಂದ ಕೆಲಸ ಮಾಡುತ್ತಾರೆಯೋ ಅವರ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರತಿಯೊಬ್ಬರಿಗೂ ಭಗವಂತ ನಿಸರ್ಗದತ್ತವಾಗಿ ಅವರವರ ಕ್ಷೇತ್ರವನ್ನು ನಿಗದಿಪಡಿಸಿರುತ್ತಾನೆ. ಯಾರು ಆ ಕ್ಷೇತ್ರದಲ್ಲಿ ಉತ್ಸಾಹದಿಂದ, ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಂಡು ನಿಸ್ವಾರ್ಥದಿಂದ ಕೆಲಸ ಮಾಡುತ್ತಾರೆಯೋ ಅವರ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ನೀಲಮ್ಮ ಎಸ್. ರೆಡ್ಡಿ ಎಲ್ಹೇರಿರವರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ನೀಲಮ್ಮ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ಪರಿಶ್ರಮದಿಂದ ಅಭ್ಯಾಸ ಮಾಡಿ, ವೈದ್ಯೆಯಾಗಿ ಬದುಕು ಕಟ್ಟಿಕೊಂಡವರು. ಅವರ ಸರಳತೆ, ಸಮಯಪ್ರಜ್ಞೆ, ಕಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯವೈಖರಿ ಯುವ ವೈದ್ಯರಿಗೆ ಮಾದರಿ ಎಂದು ತಿಳಿಸಿದರು.

ಐಎಂಎ ಅಧ್ಯಕ್ಷ ಡಾ. ಭಗವಂತ ಅನವಾರ ಮಾತನಾಡಿ, ನಾನು ಡಾ. ನೀಲಮ್ಮ ಅವರೊಂದಿಗೆ ಸುದೀರ್ಘ ಕಾಲ ಸರ್ಕಾರಿ ವೈದ್ಯನಾಗಿ ಒಟ್ಟಿಗೆ ಕೆಲಸ ಮಾಡಿದ್ದೇನೆ. ಅವರು ಕೆಲಸದ ವೇಳೆ ಬೇಸರಪಟ್ಟುಕೊಂಡಿರುವುದನ್ನು ನಾನು ಕಂಡಿಲ್ಲ. ಮಾರಕ ಕೊರೋನಾ ವೈರಸ್ ದಾಳಿ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಜಿಲ್ಲೆಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ನೀಲಮ್ಮ ಎಸ್. ರೆಡ್ಡಿ ಎಲ್ಹೇರಿ, ಮಾಜಿ ಸಚಿವ ಡಾ. ಎ. ಬಿ. ಮಾಲಕರಡ್ಡಿ ಅವರ ಮಾರ್ಗದರ್ಶನ ಮತ್ತು ತಂದೆ-ತಾಯಿಯ ಸಹಕಾರದಿಂದ ವೈದ್ಯೆ ವೃತ್ತಿಯನ್ನು ಆತ್ಮಸಾಕ್ಷಿಯಾಗಿ ನಿಭಾಯಿಸಿದ ಆತ್ಮತೃಪ್ತಿ ನನಗಿದೆ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗಿರುವುದು ಬಹಳಷ್ಟಿದೆ. ಅದಕ್ಕೆ ನನ್ನ ಆರೋಗ್ಯ ಹಾಗೂ ನಿಸರ್ಗ ಸಹಕರಿಸಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಎಲ್ಹೇರಿ ಶಿವಶಂಕರ ಮಠದ ಪೀಠಾಧಿಪತಿ ಕೊಟ್ಟುರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ವಿಜಯಕುಮಾರ, ನಾಗರತ್ನ ಕುಪ್ಪಿ, ನಾಗರತ್ನ ಅನಪೂರ, ಡಾ. ಪ್ರಸನ್ನ ಪಾಟೀಲ್ ಇತರರು ಅವರ ಸೇವೆ ಕುರಿತು ಮಾತನಾಡಿದರು.

ಡಾ. ನೀಲಮ್ಮ ಅವರಿಗೆ ಬಾಲ್ಯದಲ್ಲಿ ಶಿಕ್ಷಣ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲೆ ಅರಕೇರಾ. ಬಿ, ಯಲ್ಹೇರಿ, ಹಾಗೂ ನಗರದ ಹೆಣ್ಣು ಮಕ್ಕಳ ಅನಾಥ ಆಶ್ರಮಗಳಿಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಶೈಲಶ್ರೀ ಎಸ್. ರೆಡ್ಡಿ, ಡಿಎಚ್‌ಓ ಡಾ. ಪ್ರಭುಲಿಂಗ ಮಾನಕರ್, ಹಿರಿಯ ನ್ಯಾಯವಾದಿಗಳಾದ ಎಸ್.ಬಿ. ಪಾಟೀಲ್, ಹಿರಿಯ ವೈದ್ಯರಾದ ಡಾ. ಜಿ.ಡಿ. ಹುನಗುಂಟಿ, ಡಾ. ವೀರಭದ್ರಪ್ಪ ಎಲ್ಹೇರಿ, ಡಾ. ರಿಜ್ವಾನ ಅಫ್ರೀನ್, ಎಚ್.ಸಿ. ಪಾಟೀಲ್ ರಾಜನಕೋಳೂರು, ಮಲ್ಕರಡ್ಡಿ ಮಾಲಿ ಪಾಟೀಲ್ ಸೇರಿದಂತೆ ಇತರರಿದ್ದರು.