ಆಧುನಿಕ ವಿಧಾನದಿಂದ ಅರಿಶಿನ ಕೃಷಿ ಉತ್ಪಾದನೆ ಹೆಚ್ಚಿಸಿ

| Published : Jan 30 2025, 12:33 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹುತ್ತೂರಿನಲ್ಲಿ ಒಂದು ದಿನದ ಅರಿಶಿಣ ಬೆಳೆಯಲ್ಲಿ ಸುಸ್ಥಿರ ಕೃಷಿ ಪದ್ಧತಿ, ಮೌಲ್ಯವರ್ಧನೆ ಹಾಗೂ ನವೀನ ಮಾರುಕಟ್ಟೆ ವಿಧಾನಗಳ ಕುರಿತ ತರಬೇತಿ ಕಾರ್ಯಗಾರವನ್ನು ಡಾ.ಜಿ.ಎಸ್.ಕೆ.ಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರೈತರು ಆಧುನಿಕ ಕೃಷಿ ವಿಧಾನ ಅಳವಡಿಸಿಕೊಂಡು ಅರಿಶಿನ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ನಿಟ್ಟಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸದಾ ರೈತರ ಜೊತೆ ನಿಲ್ಲುತ್ತದೆ ಎಂದು ಬೆಂಗಳೂರು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಡೀನ್‌ ಡಾ.ಜಿ.ಎಸ್.ಕೆ.ಸ್ವಾಮಿ ಹೇಳಿದರು.

ತಾಲೂಕಿನ ಹುತ್ತೂರಿನಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ, ಬೆಂಗಳೂರು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ, ಸಿಎಸ್ಎಸ್-ಎಂಐಡಿಎಚ್ ಮತ್ತು ಶ್ರಮ ಸಂಜಾತ ರೈತ ಉತ್ಪಾದಕರ ಸಂಸ್ಥೆ ಸಹಯೋಗದಲ್ಲಿ ಒಂದು ದಿನದ ಅರಿಶಿಣ ಬೆಳೆಯಲ್ಲಿ ಸುಸ್ಥಿರ ಕೃಷಿ ಪದ್ಧತಿ, ಮೌಲ್ಯವರ್ಧನೆ ಹಾಗೂ ನವೀನ ಮಾರುಕಟ್ಟೆ ವಿಧಾನಗಳ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ರೈತರೊಬ್ಬರು ನಮಗೆ ಅವಶ್ಯಕತೆ ಇರುವಾಗ ಯಾವುದೇ ರೀತಿಯ ವೈಜ್ಞಾನಿಕ ಮಾಹಿತಿ ಸಿಗುವುದಿಲ್ಲ. ತೋಟಗಾರಿಕಾ ವಿಶ್ವವಿದ್ಯಾನಿಲಯದಿಂದ ಕೊಡಿಸಿ ಎಂಬ ಮನವಿಗೆ ಜಿಎಸ್‌ಕೆ ಸ್ವಾಮಿ ಪ್ರತಿಕ್ರಿಯಿಸಿ ಖಂಡಿತವಾಗಿಯೂ ನಿಮ್ಮ ಜೊತೆ ವಿಶ್ವವಿದ್ಯಾನಿಲಯ ಇರುತ್ತದೆ ನಿಮಗೆ ಬೇಕಾದ ಸಹಕಾರ ನಾವು ಕೊಡುತ್ತೇವೆ ಎಂದು ಹೇಳಿದರು. ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಠದ ನಿರ್ದೇಶಕ ಡಾ.ಆರ್.ಕೆ.ಮೇಸ್ತಾ ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ರೈತರು ಸಾಮೂಹಿಕವಾಗಿ ಒಂದುಗೂಡಿ ಕೃಷಿ ಕಾರ್ಯಗಳನ್ನು ಮತ್ತು ಮಾರಾಟ ಪ್ರಕ್ರಿಯೆಗಳನ್ನು ಮಾಡಿಕೊಳ್ಳುವುದರಿಂದ ಹೆಚ್ಚಿನ ಲಾಭವಾಗುತ್ತದೆ ಎಂದರು.

ಅರಿಶಿಣ ಕೃಷಿಯು ಭಾರತದಲ್ಲಿ ಅನಾದಿಕಾಲದಿಂದಲು ಮಾಡುತ್ತಿದ್ದು ಇದನ್ನು ಕೆಲವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪೇಟೆಂಟಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಅದನ್ನ ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿದೆ ಎಂದು ಹೇಳಿದರು. ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಹರೀಶ್‌ ಬಿ.ಎಸ್‌.ಮಾತನಾಡಿ, ಅರಿಶಿನ ಕೃಷಿಯನ್ನು ಹೇಗೆ ವ್ಯವಸ್ಥಿತವಾಗಿ ಮಾಡಬೇಕು ಮಣ್ಣು ಪರೀಕ್ಷೆಯ ಮಹತ್ವ ಮತ್ತು ಅರಿಶಿಣದಲ್ಲಿ ಉತ್ಪಾದಕತೆ ಹೆಚ್ಚಿಸಲು ಮಣ್ಣು ಪರೀಕ್ಷೆ ಮಾಡಿಸಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಪೋಷಕಾಂಶ ಹೇಗೆ ಪೂರೈಕೆ ಮಾಡಬೇಕು ಎಂದು ವಿವರಿಸಿದರು.

ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಹೊಸ ತಳಿಗಳನ್ನು ಮತ್ತು ಅದರ ಮಹತ್ವಗಳನ್ನು ವಿವರಿಸಿದರಲ್ಲದೆ, ಅಲ್ಲದೆ ರೈತರಿಗೆ ಮಣ್ಣು ಪರೀಕ್ಷೆ ವಿಶ್ವವಿದ್ಯಾನಿಲಯದಿಂದ ಮಾಡಿಸಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿಕೊಡಲು ಪ್ರಕ್ರಿಯೆಯನ್ನು ರೂಪಿಸಲಾಗುವುದು ಮತ್ತು ರೈತರು ಮುಂದೆ ಬಂದರೆ ಅವರಿಗೆ ಬೇಕಾದ ಎಲ್ಲಾ ನೆರವು ನೀಡಲಾಗುತ್ತದೆ ಎಂದರು.

ಸಿಎಫ್‌ಟಿಆರ್‌ಐ ಹಿರಿಯ ತಾಂತ್ರಿಕ ಅಧಿಕಾರಿ ಡಾ.ಅನಿಲ್ ಎಸ್ ಮಾತನಾಡಿ, ಸಿಎಫ್‌ಟಿಆರ್‌ಐ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳಾದ ಅರಿಶಿಣ ಸಂಸ್ಕರಣ ವಿಧಾನ, ಅರಿಶಿನದಲ್ಲಿ ಕರ್ಕ್ಯುಮಿನ್, ಒಲಿಯೋರೆಸಿನ್ ಮತ್ತು ಟರ್ಮರಿನಾಯಿಲ್ ಹೇಗೆ ಉತ್ಪಾದಿಸಬೇಕು ಮತ್ತು ಅದರ ಮಾರುಕಟ್ಟೆಯ ಪ್ರಾಮುಖ್ಯತೆಗಳನ್ನು ವಿವರಿಸಿದರು.

ತಾವು ತಂದಿದ್ದ ಎಲ್ಲ ಅರಿಶಿಣ ಉಪ ಉತ್ಪನ್ನಗಳನ್ನು ರೈತರಿಗೆ ಪ್ರದರ್ಶಿಸಿ ಮತ್ತು ರೈತರ ಕೈಗೆ ಕೊಟ್ಟು ಅದರ ಸುವಾಸನೆ ಸವಿಯುವಂತೆ ಮಾಡಿದರು. ಅಲ್ಲದೆ ಅರಿಶಿನದ ಕರ್ಕ್ಯುಮೆನ್ ಮತ್ತು ಆಯಿಲ್ ಹೇಗೆ ನೀರಿನಲ್ಲಿ ಕರಗುತ್ತದೆ ಮತ್ತು ಅರಿಶಿನ ಪುಡಿ ಹೇಗೆ ಕರಗುತ್ತದೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ರೋಗ ಕೀಟ ತಜ್ಞ ಡಾ.ಗಂಗಾಧರ ನರಬೆಂಟಿ ಮಾತನಾಡಿ, ಅರಿಶಿನದಲ್ಲಿ ಗಡ್ಡೆ ಕೋಳೆ ರೋಗ, ಕಂಡ ಕೊರಕ, ಬೇರು ಹುಳ ಮತ್ತು ಗಡ್ಡೆ ಕೊಳೆ ತರುವ ನೊಣದ ಬಗ್ಗೆ ಮಾತನಾಡಿ, ಅವುಗಳ ಜೈವಿಕ ಮತ್ತು ರಾಸಾಯನಿಕ ನಿರ್ವಹಣೆ ಕುರಿತು ಹೇಳಿದರು.

ರೋಗದ ಹತೋಟಿ ಪ್ರಾಥಮಿಕ ಹಂತದಲ್ಲೇ ಮಾಡಿದರೆ ಅಧಿಕ ಇಳುವರಿ ಪಡೆದು ನಷ್ಟ ತಪ್ಪಿಸಬಹುದು. ಅಲ್ಲದೆ ರಾಸಾಯನಿಕಗಳಲ್ಲಿ ಬರುವ ವಿಷ ಪ್ರಮಾಣ ತ್ರಿಕೋನದ ಬಗ್ಗೆ ತಿಳಿಸಿ ಅವುಗಳಲ್ಲಿ ಹಸಿರು ಮತ್ತು ನೀಲಿ ತ್ರಿಕೋನಗಳಿರುವ ರಾಸಾಯನಿಕ ಮಾತ್ರ ಬಳಸಬೇಕೆಂದು ಹೇಳಿದರು. ಶ್ರಮ ಸಂಜಾತ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ನಾಗಾರ್ಜುನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಚೌಡಹಳ್ಳಿ ಸದಾಶಿವಮೂರ್ತಿ, ವೃಷಬೇಂದ್ರ, ಮಾದಪ್ಪ, ನಾಗರಾಜು ವೀರನಪುರ, ರೈತಪರ ಹೋರಾಟಗಾರ ಕಂದೆಗಾಲ ಮಾದಪ್ಪ, ನಾಗೇಂದ್ರ,ಶ್ಯಾನಡ್ರಹಳ್ಳಿ ಬಸವರಾಜು, ಬಲಚವಾಡಿ ಸುರೇಶ, ಮಹೇಂದ್ರ, ವಿನೋದ್, ಪ್ರದೀಪ್, ರಾಜು, ಸೋಮ, ನಾಗೇಂದ್ರ ಹುತ್ತೂರು ಸೇರಿದಂತೆ ನೂರಾರು ಮಂದಿ ರೈತರು ಹಾಜರಿದ್ದರು.