ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಹಿಳೆಯರು ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಹೊಂದುತ್ತಿದ್ದು ಅವರಿಗೆ ಇನ್ನು ಹೆಚ್ಚೆಚ್ಚು ಅವಕಾಶಗಳ ನೀಡಬೇಕಾಗಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಸೋಮವಾರ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ತೊಟ್ಟಿಲ ತೂಗುವ ಕೈಗಳು ಈ ದೇಶವನ್ನು ಆಳ್ವಿಕೆ ಮಾಡಬಲ್ಲವು ಎಂಬಂತೆ ಮಹಿಳೆಯರಿಗೆ ವಹಿಸಿದ ಜವಾಬ್ದಾರಿಗಳ ಪ್ರಾಮಾಣಿಕವಾಗಿ ನಿರ್ವಹಿಸಿ ಸೈ ಎನ್ನಿಸಿಕೊಳ್ಳುವವರಾಗಿದ್ದು ಅವರಿಗೆ ಪ್ರಸ್ತುತ 33 ಶೇಕಡಾ ಮೀಸಲಾತಿ ಶೇ.50ಕ್ಕೆ ಹೆಚ್ಚಳ ಮಾಡಬೇಕಾಗಿದೆ ಎಂದರು.
ಒಬ್ಬ ಪುರುಷ ಯಶಸ್ವಿಯಾಗಬೇಕಾದರೆ ಆತನ ಹಿಂದೆ ಒಬ್ಬ ಮಹಿಳೆಯ ಪರಿಶ್ರಮ ಅವನಷ್ಟೆ ಇರುತ್ತದೆ. ಪುರುಷರ ಸರಿ ಸಮಾನವಾಗಿರುವ ಮಹಿಳೆಗೆ ಹೆಚ್ಚಿನ ಅವಕಾಶ ನೀಡಬೇಕು. ಮೀಸಲಾತಿ ಕೇವಲ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಸೀಮಿತವಾಗಿರದೆ ವಿಧಾನಸಭೆ, ಲೋಕಸಭೆಗೂ ಮೀಸಲಾತಿ ಹೆಚ್ಚಿಸಬೇಕು ಎಂದರು.ಸಮಾರಂಭದ ಸಾನ್ನಿಧ್ಯವನ್ನು ಹಾಲಸ್ವಾಮಿ ವಿರಕ್ತ ಮಠದ ಬಸವ ಜಯಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಸಿ.ಡಿ.ಕಿರಣ್, ನಗರ ಘಟಕದ ಅಧ್ಯಕ್ಷೆ ಜ್ಯೋತಿ ಕೊಟ್ರೇಶ್ ಕೋರಿ, ಪುರಸಭಾ ಸದಸ್ಯೆ ಕಮಲಾ, ಭಾರತಿ ಪ್ರಸಾದ್, ತಾಲೂಕು ಘಟಕ ಅಧ್ಯಕ್ಷ ಸಿ.ಆರ್.ನಾಗೇಂದ್ರಪ್ಪ, ಮಂಜುನಾಥ್, ದೃವ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸೌಭಾಗ್ಯ ಪ್ರಶಾಂತ್, ಕೆ.ಪಿ.ಎಂ.ಲತಾ ಸೇರಿ ಮೊದಲಾದವರಿದ್ದರು.