ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಏಕವ್ಯಕ್ತಿ ನಿರ್ಧಾರದಿಂದ ವ್ಯರ್ಥವಾಗುತ್ತಿರುವ ನೈಜ ಕಾರ್ಮಿಕರ ಸೆಸ್ ಹಣ ಉಳಿಸಲು ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ನಗರದ ಜಯದೇವ ವೃತ್ತದಲ್ಲಿ ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಇತರರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಘೋಷಣೆ ಕೂಗುತ್ತಾ ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿದ ಪ್ರತಿಭಟನಾಕಾರರು ಎಸಿ ಕಚೇರಿ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಎಚ್.ಜಿ.ಉಮೇಶ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪ್ರತಿ ತಿಂಗಳು ಪಿಂಚಣಿ ಸಹಾಯಧನ 3 ಸಾವಿರ ರು.ನಿಂದ 6 ಸಾವಿರ ರು.ಗೆ ಹೆಚ್ಚಿಸಬೇಕು. ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ 2022-23ರಂತೆ ಮುಂದುವರಿಸಬೇಕು. ದೀರ್ಘಾವಧಿ ಬಾಕಿ ಇರುವ ಪಿಂಚಣಿ ಮ್ತತು ಇತರೆ ಸಹಾಯಧನ ಅರ್ಜಿಗಳ ತಕ್ಷಣ ವಿಲೇ ಮಾಡಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ 1996ರ ಕಾಯ್ದೆ ಲೇಬರ್ ಕೋಡಿಗೆ ವಿಲೀನಗೊಳಿಸುವ ನಿರ್ಣಯ ತಕ್ಷಣವೇ ಕೈಬಿಡಬೇಕು ಎಂದರು.ಪ್ರಸ್ತುತ ಈಗಿರುವ ಖಾಸಗಿ ಸೆಸ್ ಸಂಗ್ರಹ ಮಾಡುವ 10 ಲಕ್ಷ ಹಾಗೂ ವಾಣಿಜ್ಯ ಸೆಸ್ 5 ಲಕ್ಷ ಅಂದಾಜು ಪಟ್ಟಿ ಪ್ರಕಾರ ಸಂಗ್ರಹಿಸುತ್ತಿರುವ ಕಾನೂನನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಿ, ಹೆಚ್ಚಿಸಬಾರದು. ಒಳಾಂಗಣ ಅಲಂಕಾರಕ್ಕೂ ಸೆಸ್ ಸಂಗ್ರಹಿಸಬೇಕು. ಮಂಡಳಿ ಮತ್ತು ಕಾರ್ಮಿಕರ ಮಧ್ಯೆ ಅರ್ಜಿ ಹಾಗೂ ಇತರೆ ಸೌಲಭ್ಯಗಳ ಅರ್ಜಿಗಳನ್ನು ಸಾಫ್ಚ್‌ವೇರ್(ಆನ್ ಲೈನ್)ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆ ಮುಖ್ಯಸ್ಥರನ್ನೊಳಗೊಂಡಂತೆ ತಮ್ಮ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಕಟ್ಟಡ ಮತ್ತು ಇಥರೆ ನಿರ್ಮಾಣ ಕಾರ್ಮಿಕರ ಕುಟುಂಬ ಒಳಗೊಂಡಂತೆ ಇಎಸ್ಐ ಮಾದರಿ ಚಿಕಿತ್ಸೆ ಕ್ಯಾಶ್ ಲೆಸ್ ಆಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಶೇ.70ರಷ್ಟು ಬೋಗಸ್ ಕಾರ್ಡ್ ಇರುವ ಬಗ್ಗೆ ಕಾರ್ಮಿಕರ ಸಚಿವರು ಹೇಳಿದ್ದು, 58 ಲಕ್ಷ ಕಾರ್ಡ್‌ದಾರರ ಪೈಕಿ ಬೋಗಸ್ ಕಾರ್ಡ್‌ಗಳನ್ನು ರದ್ಧುಪಡಿಸಿ, ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. 31 ಸಾವಿರ ರು. ಬೆಲೆ ಬಾಳುವ ಲ್ಯಾಪ್ ಟಾಪ್‌ಗಳನ್ನು 72 ಸಾವಿರ ರು.ಗೆ ಖರೀದಿಸಿದ್ದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಕಾರ್ಮಿಕರಿಗೆ ನೀಡಿದ ಕಿಟ್‌ಗಳು ಕಳಪೆ ಮಟ್ಟದ್ದವಾಗಿದ್ದು, ಈ ಬಗ್ಗೆಯೂ ತನಿಖೆಯಾಗಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಒಳಗೊಂಡ ಮನವಿ ಪತ್ರ ಎಸಿ ಕಚೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.ಸಂಘಟನೆ ಜಿಲ್ಲಾಧ್ಯಕ್ಷ ವಿ.ಲಕ್ಮಣ, ಶಿವಕುಮಾರ ಡಿ.ಶೆಟ್ಟರ್, ಸುರೇಶ ಯರಗುಂಟೆ, ಎಸ್.ಬಿ.ರುದ್ರೇಶ, ಚಂದ್ರಶೇಖರ, ಎಚ್.ಕೆ.ಆರ್. ಸುರೇಶ, ಎಸ್.ಎಂ.ಸಿದ್ದಲಿಂಗಪ್ಪ, ಜಗಳೂರು ವೀರಣ್ಣ, ಬಿ.ಎಂ.ಮಲ್ಲಿಕಾರ್ಜುನಪ್ಪ, ಡಿ.ಷಣ್ಮುಗಂ, ಮಹೇಶ ದೊಣ್ಣೇಹಳ್ಳಿ, ಮಹೇಶ ಸೇರಿ ಇತರರಿದ್ದರು.