ವಿಶೇಷ ತರಗತಿ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಿ: ಜಿಪಂ ಉಪ ಕಾರ್ಯದರ್ಶಿ

| Published : Oct 07 2024, 01:37 AM IST

ವಿಶೇಷ ತರಗತಿ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಿ: ಜಿಪಂ ಉಪ ಕಾರ್ಯದರ್ಶಿ
Share this Article
  • FB
  • TW
  • Linkdin
  • Email

ಸಾರಾಂಶ

ರಜೆಯ ದಿನಗಳಲ್ಲಿಯೂ ಸಹಿತ ಶಿಕ್ಷಕರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಮುಂದಾಗಬೇಕು.

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಲ್ಲಿಕಾರ್ಜುನ ತೊದಲಬಾಗಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ರಜೆಯ ದಿನಗಳಲ್ಲಿಯೂ ಸಹಿತ ಶಿಕ್ಷಕರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಕಳೆದ ವರ್ಷ ಕುಷ್ಟಗಿ ತಾಲೂಕಿನ ಫಲಿತಾಂಶ ಕಡಿಮೆ ಬಂದ ಹಿನ್ನೆಲೆಯಲ್ಲಿ ರಜೆಯ ದಿನಗಳಲ್ಲಿಯೂ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ, ನುರಿತ ಶಿಕ್ಷಕರಿಂದ ಬೇರೆ ಬೇರೆ ಶಾಲೆಗೆ ಪಾಠಬೋಧನೆ ಮಾಡಿಸಬೇಕು, ರಜೆಯ ಅವಧಿಯಲ್ಲಿ ಪಾಠ ಬೋಧನೆ ಮಾಡಲು ಹಿಂದೇಟು ಹಾಕುವ ಶಿಕ್ಷಕರಿಗೆ ನೋಟಿಸು ಕೊಡಬೇಕು, ಫಲಿತಾಂಶ ಹೆಚ್ಚಳಕ್ಕೆ ಮುಂದಾಗಬೇಕು. ಡಿಸೆಂಬರ್ ತಿಂಗಳಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜು ನೀಡಬೇಕು ಎಂದರು.

ತಾಲೂಕು ಪಂಚಾಯಿತಿ ಇಒ ಪಂಪಾಪತಿ ಹಿರೇಮಠ ಮಾತನಾಡಿ, ತಾಲೂಕಿನ ಎಲ್ಲ ಶಾಲೆಗಳಲ್ಲಿನ ಶಿಕ್ಷಕರು ಮಕ್ಕಳಿಗೆ ಶೌಚಾಲಯದ ಜಾಗೃತಿ ಮೂಡಿಸಬೇಕು. ಶಾಲೆಯಲ್ಲಿ ನೈರ್ಮಲ್ಯತೆ ಕಾಪಾಡಬೇಕು. ಕುಡಿಯುವ ನೀರು ಸ್ವಚ್ಛತೆಯಿಂದ ಇಟ್ಟುಕೊಳ್ಳುವ ಕೆಲಸ ಮಾಡಬೇಕು. ಶಾಲಾ ಮಕ್ಕಳಿಂದ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದರು.

ನರೇಗಾ ಕಾಮಗಾರಿಗಳ ಅನುಮೋದನೆಗಾಗಿ ಕೆಲ ಅಧಿಕಾರಿಗಳು ಫಲಾನುಭವಿಗಳನ್ನು ನೇರವಾಗಿ ನಮ್ಮ ಹತ್ತಿರ ಕಳುಹಿಸುವ ಬದಲಿಗೆ ಅಧಿಕಾರಿಗಳು ದಾಖಲಾತಿಗಳನ್ನು ತಂದು ಅನುಮೋದನೆ ಪಡೆಯುವ ಕೆಲಸ ಮಾಡಬೇಕು. ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಸೇರಿದಂತೆ ಅನೇಕ ವಸತಿ ನಿಲಯಗಳಲ್ಲಿ ಸ್ವಚ್ಛತೆ ನೈರ್ಮಲ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಸೊಳ್ಳೆ ಪರದೆ, ಫ್ಯಾನ್ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಿಕೊಡುವ ಕೆಲಸ ಮಾಡಬೇಕು. ಏನಾದರೂ ಸಮಸ್ಯೆಗಳು ಇದ್ದರೆ ನಮ್ಮ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.

ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿಯು ಮುಗಿಯುವ ಹಂತಕ್ಕೆ ಬಂದಿದ್ದು. ಎಲ್ಲ ಮನೆಗಳಿಗೆ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ನೀರಿನಲ್ಲಿ ತೊಂದರೆ ಕಾಣಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

ಎಇಇ ವಿಜಯಕುಮಾರ ಮಾತನಾಡಿ, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರು ಸರಬರಾಜು ಆಗುತ್ತಿದ್ದು, ಬಹಳಷ್ಟು ನೀರು ಪೋಲಾಗುತ್ತಿದೆ. ನೀರಿನ ಬಳಕೆಯ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿಯ ಕಾರ್ಯಕ್ರಮ ಮಾಡಬೇಕು ಎಂದರು.

ಈ ಸಂದರ್ಭ ಬಿಇಒ ಸುರೇಂದ್ರ ಕಾಂಬಳೆ, ಸಿಡಿಪಿಒ ಯಲ್ಲಮ್ಮ ಹಂಡಿ, ರಾಜಶೇಖರಗೌಡ, ವೀರಪ್ಪ ಹಾದಿಮನಿ, ಬಾಲಚಂದ್ರ ಸಂಗನಾಳ, ಶ್ರೀನಿವಾಸ ನಾಯಕ, ಸುಂದರಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು. ಇಲಾಖೆವಾರು ಮಾಹಿತಿ ಹಂಚಿಕೊಂಡರು.ನೋಟಿಸ್‌ ನೀಡಿ:

ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸರಿಯಾಗಿ ಸಭೆಗೆ ಬರುತ್ತಿಲ್ಲ. ಅವರು ಸರಿಯಾದ ರೀತಿಯಲ್ಲಿ ಕಟ್ಟಡಗಳ ನಿರ್ಮಾಣದ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಇದೆ. ಹಾಗಾಗಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ನೋಟಿಸ್‌ ನೀಡಬೇಕು. ಇಂದಿನ ಸಭೆಗೆ ಹಾಜರಾಗದ ಕಂದಾಯ, ಆರೋಗ್ಯ, ಕೃಷಿ, ಪುರಸಭೆ ಸೇರಿದಂತೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸು ನೀಡುವಂತೆ ತಾಪಂ ಅಧಿಕಾರಿಗೆ ಜಿಪಂ ಉಪಕಾರ್ಯದರ್ಶಿ ಸೂಚನೆ ನೀಡಿದರು.