ಸಾರಾಂಶ
ಇಂದಿನ ಅಧುನಿಕ ಯುಗದಲ್ಲಿ ಎಲ್ಲವೂ ತಂತ್ರಜ್ಞಾನ, ಡಿಜಿಟಲೀಕರಣವಾಗಿದೆ.
ದಾಂಡೇಲಿ: ಇಂದಿನ ಅಧುನಿಕ ಯುಗದಲ್ಲಿ ಎಲ್ಲವೂ ತಂತ್ರಜ್ಞಾನ, ಡಿಜಿಟಲೀಕರಣವಾಗಿದೆ. ಆದರೂ ಕೂಡ ಗ್ರಂಥಾಲಯಗಳು ತಮ್ಮ ಮಹತ್ವ ಗಟ್ಟಿಯಾಗಿ ಉಳಿಸಿಕೊಂಡಿವೆ. ಗ್ರಂಥಾಲಯವನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವ ಮೂಲಕ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದು ದಾಂಡೇಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ.ಹಾದಿಮನಿ ಹೇಳಿದರು.
ಅವರು ತಾಲೂಕಾಡಳಿತದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗ್ರಂಥ ಪಾಲಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಪಿತಾಮಹ ಡಾ. ಎಸ್.ಆರ್. ರಂಗನಾಥ್ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು.ಕುಗ್ರಾಮದ ಬಡ ಕುಟುಂಬದಿಂದ ಬಂದ ರಂಗನಾಥ್ ಇಡೀ ದೇಶಕ್ಕೊಂದು ಗ್ರಂಥಾಲಯ ನಿರ್ವಹಣೆಯ ಮಾರ್ಗದರ್ಶಿ ಹಾಕಿ ಕೊಟ್ಟರು. ಅವರ ಜನ್ಮದಿನವನ್ನು ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ಪ್ರತಿಯೊಬ್ಬ ಗ್ರಂಥ ಪಾಲಕರು ಕೂಡ ರಂಗನಾಥ್ ಆದರ್ಶ ಬೆಳೆಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ದಾಂಡೇಲಿ ಸರ್ಕಾರಿ ಪದವಿ ಕಾಲೇಜಿನ ಗ್ರಂಥಾಲಯ ಅಧಿಕಾರಿ ಗೀತಾ ಕೊಟ್ಟೆ ಡಾ.ಎಸ್.ಆರ್.ರಂಗನಾಥ್ ಅವರ ಬದುಕು ಹಾಗೂ ಅವರು ಮಾಡಿದ ಸಾಧನೆ ಬಗ್ಗೆ ತಿಳಿಸಿ ಇಂದಿನ ದಿನದಲ್ಲಿ ಗ್ರಂಥಾಲಯಗಳ ಮಹತ್ವ ಮತ್ತು ಅವುಗಳ ಬಳಕೆಯ ಕುರಿತಾಗಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಶುಭಾಶಯ ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಂಬಿಕಾನಗರದ ಸಂತೋಷ ರಾಠೋಡ್, ಬಡಾಕಾನಶಿರಡಾದ ಸಂತೋಷ ಮಡಿವಾಳ, ತಾಪಂ ಲೆಕ್ಕ ಸಹಾಯಕ ಧರೆಪ್ಪ ನಾಗಗೋಡ, ತಾಪಂ ವ್ಯವಸ್ಥಾಪಕಿ ಕವಿತಾ ಚನ್ನಯ್ಯನವರ, ಆನಂದ ಬಿಲ್ಲೇಕರ, ತಾಲೂಕಿನ ಗ್ರಂಥ ಪಾಲಕರಾದ ರತ್ನಾ ಜಾಧವ್, ರಾಧಾ ಸಾಂಗ್ಲೀಕರ, ಈರಣ್ಣಾ ವಡ್ಡರ್ ಮುಂತಾದವರು ಉಪಸ್ಥಿತರಿದ್ದರು.