ಹೆಚ್ಚು ಮಕ್ಕಳ ಪಡೆಯುವುದಕ್ಕಿಂತ ಜೀವನ ಮಟ್ಟ ಹೆಚ್ಚಿಸಿಕೊಳ್ಳಿ: ಡಾ. ದತ್ತಾತ್ರೇಯ ಪೀಸೆ

| Published : Jul 15 2025, 01:08 AM IST

ಹೆಚ್ಚು ಮಕ್ಕಳ ಪಡೆಯುವುದಕ್ಕಿಂತ ಜೀವನ ಮಟ್ಟ ಹೆಚ್ಚಿಸಿಕೊಳ್ಳಿ: ಡಾ. ದತ್ತಾತ್ರೇಯ ಪೀಸೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ಸವಾಲಿನ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ದೇಶಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ಸವಾಲಿನ ಕೆಲಸವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದತ್ತಾತ್ರೇಯ ಪೀಸೆ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿನದಿಂದ ದಿನಕ್ಕೆ ಜನಸಂಖ್ಯೆ ನಾಗಲೋಟಾದಂತೆ ಓಡುತ್ತಿದೆ. ಇದೇ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಾ ಹೋದರೆ ಮುಂದಿನ ದಿನಗಳಲ್ಲಿ ಭೀಕರ ಅನಾಹುತ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್ಚುಮಕ್ಕಳನ್ನು ಪಡೆಯುವುದಕ್ಕಿಂತ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಬಹುಮುಖ್ಯ ಎಂಬ ಅಂಶವನ್ನು ಜನಸಾಮಾನ್ಯರಿಗೆ ತಿಳಿ ಹೇಳಬೇಕಿದೆ ಎಂದು ಹೇಳಿದರು.

ಶಸ್ತ್ರಚಿಕಿತ್ಸೆ ತಜ್ಞ ಡಾ. ರಾಜೇಶ್ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಆಹಾರ, ನೀರು, ಬಟ್ಟೆ, ವಸತಿ ಸೇರಿದಂತೆ ಅಗತ್ಯ ಸಂಪನ್ಮೂಲಗಳ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಜನಸಂಖ್ಯಾ ನಿಯಂತ್ರಣ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭುವನೇಶ್ವರಿ ಸಿ.ಜಿ. ಮಾತನಾಡಿ, ವಿಶ್ವದ ಜನಸಂಖ್ಯೆ 820 ಕೋಟಿಗಿಂತಲೂ ಹೆಚ್ಚಾಗಿದ್ದರೆ, ಭಾರತದ ಜನಸಂಖ್ಯೆ146 ಕೋಟಿಗಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಪ್ರತಿ ಗಂಟೆಗೆ 2403 ಮಕ್ಕಳ ಜನನವಾಗುತ್ತಿದೆ. ಪ್ರತಿದಿನ 57685, ಪ್ರತಿತಿಂಗಳು 13,84,457, ಪ್ರತಿ ವರ್ಷ 1.66 ಕೋಟಿ ಶಿಶುಗಳ ಜನನವಾಗುತ್ತಿದೆ. ಆದ್ದರಿಂದ ಜನಸಂಖ್ಯೆ ತಡೆಗಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಬಿಎಚ್‌ಇಒ ಗೌರಮ್ಮ ಮಾತನಾಡಿ, ಅನಕ್ಷರತೆ, ಬಡತನ, ಮೂಢನಂಬಿಕೆ, ಬಾಲ್ಯ ವಿವಾಹ, ಕಡಿಮೆ ಅಂತರದ ಹೆರಿಗೆ, ಸಾರ್ವತ್ರಿಕ ವಿವಾಹ, ಗಂಡುಮಕ್ಕಳ ಬಯಕೆಯೇ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ಅರವಳಿಕೆ ತಜ್ಞ ಡಾ. ವಿನಯ್, ಡಾ. ಮಂಗಳ, ಡಾ. ವಂದನಾ, ತಿಪ್ಪೇಸ್ವಾಮಿ, ಸಹಾಯಕ ಆಡಳಿತಾಧಿಕಾರಿ ವೆಂಕಟೇಶ್ ಬಾಗಲರ್, ರೇಣುಕಾ, ಪವಿತ್ರ, ಸುಮಾ, ಬಸಮ್ಮ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇದ್ದರು.