ಸಾರಾಂಶ
ರೈತರ ಮೇಲೆ ದಾಳಿ, ಬೆಳೆ ನಾಶ । ಕಂಗೆಟ್ಟ ಅನ್ನದಾತ ಸಮುದಾಯ
ಎಂ. ಪ್ರಹ್ಲಾದ್ಕನ್ನಡಪ್ರಭ ವಾರ್ತೆ ಕನಕಗಿರಿ
ಕಳೆದರೆಡು ತಿಂಗಳಿಂದ ತಾಲೂಕಿನಲ್ಲಿ ಕರಡಿಗಳ ಉಪಟಳ ಹೆಚ್ಚಾಗಿದ್ದು, ರೈತರ ಮೇಲೆ ದಾಳಿ ಮಾಡುವುದು, ಬೆಳೆ ನಾಶಪಡಿಸುವುದು ಮುಂದುವರಿದಿದೆ.ಎರಡ್ಮೂರು ತಿಂಗಳ ಹಿಂದೆ ತಾಲೂಕಿನ ರಾಂಪುರ ಗ್ರಾಮದ ಹೊರವಲಯದಲ್ಲಿ ಕರಡಿ ದಾಳಿಗೆ ವಯೋವೃದ್ಧ ಚನ್ನಪ್ಪ ಮಡಿವಾಳ ಮೃತರಾಗಿದ್ದರು. ಕಳೆದ ತಿಂಗಳು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪರಾಪುರ ಗ್ರಾಮದ ರೈತ ಶಿವಶಂಕ್ರಪ್ಪ ಮೇಲೆ ದಾಳಿ ನಡೆಸಿರುವ ಕರಡಿ ತೀವ್ರವಾಗಿ ಗಾಯಗೊಳಿಸಿತ್ತು. ಹೀಗೆ ಗುಡದೂರು ಸೀಮಾ ವ್ಯಾಪ್ತಿಯ ರೈತ ಹನುಮಂತಪ್ಪ ವಕ್ರಾಣಿಗೆ ಸೇರಿದ ಕಲ್ಲಂಗಡಿ ತೋಟಕ್ಕೆ ನುಗ್ಗಿದ ಕರಡಿಗಳು ಬೆಳೆಯನ್ನು ನಾಶಪಡಿಸಿವೆ.
ಜು.೧೩ರ ರಾತ್ರಿ ತಾಲೂಕಿನ ಹಿರೇಖೇಡ ಗ್ರಾಮದ ರೈತ ದುರುಗಪ್ಪ ನಡಲಮನಿ ಅವರಿಗೆ ಸೇರಿದ ೪ ಎಕರೆ ಜಮೀನಿನ ಪೈಕಿ ೧ ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಸಿಡ್ಸ್ ಬೆಳೆ ಹಾಳು ಮಾಡಿದೆ. ಇದರಿಂದ ರೈತ ದುರುಗಪ್ಪ ಅವರಿಗೆ ಸಾವಿರಾರು ರು. ನಷ್ಟವಾಗಿದೆ.ಗುಡದೂರು, ಹಿರೇಖೇಡ, ಗೋಡಿನಾಳ, ಆಕಳಕುಂಪಿ ಸೇರಿದಂತೆ ನಾನಾ ಗ್ರಾಮಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ನುಗ್ಗುತ್ತಿರುವ ಕರಡಿಗಳು ಬೆಳೆ ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ. ಕರಡಿ ಉಪಟಳಕ್ಕೆ ಲಕ್ಷಾಂತರ ರು. ಹಾನಿಗೊಳಗಾದ ರೈತರಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿಲ್ಲ. ಇತ್ತ ದಾಳಿಯಿಂದ ಗಾಯಗೊಂಡವರಿಗೂ ಪರಿಹಾರ ಒದಗಿಸಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಪರಿಹಾರಕ್ಕೆ ಅಂಗಲಾಚುತ್ತಿದ್ದು, ಈಗಲಾದರೂ ಅರಣ್ಯ ಇಲಾಖೆ ಸ್ಪಂದಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಹಿರೇಖೇಡ, ಗುಡದೂರು, ಆಕಳಕುಂಪಿ, ಗೋಡಿನಾಳ ಸೇರಿ ಗುಡ್ಡಗಾಡು ಪ್ರದೇಶದ ರೈತರ ಜಮೀನುಗಳಿಗೆ ಕರಡಿಗಳು ನುಗ್ಗಿ ದಾಂಧಲೆ ನಡೆಸುತ್ತಿವೆ. ಕರಡಿಗಳ ಉಪಟಳ ಹೆಚ್ಚಾಗಿದೆ. ಕಲ್ಲಂಗಡಿ, ಮೆಕ್ಕೆಜೋಳ ಸೇರಿ ನಾನಾ ಬೆಳೆ ನಾಶಪಡಿಸುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಹಾನಿಗೊಳಗಾದ ರೈತ ಬಸವರಾಜ ತಾಲೂಕಿನ ಪರಾಪುರ ಗ್ರಾಮದ ಕರಡಿ ದಾಳಿಯಿಂದ ಗಂಭೀರ ಗಾಯಗೊಂಡ ಶಿವಶಂಕ್ರಪ್ಪ ಹಾಗೂ ಬೆಳೆಯ ಹಾನಿಗೊಳಗಾದ ರೈತರಿಗೆ ಶೀಘ್ರದಲ್ಲಿ ಪರಿಹಾರ ನೀಡಲಾಗುವುದು ಎಂದು ವನಪಾಲಕ ಶಿವಕುಮಾರ ತಿಳಿಸಿದ್ದಾರೆ.