ಬಹದ್ದೂರುಗಟ್ಟ ಗ್ರಾಮದಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ ಶಿಬಿರಾಧಿಕಾರಿ ಲೋಕೇಶ ನಾಯಕ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಬಾಲ್ಯ ವಿವಾಹ ಪ್ರಕರಣಗಳು ಕಂಡುಬರುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ ಎಂದು ಕಾನೂನು ಹಾಗೂ ಪರಿವೀಕ್ಷಣ ಅಧಿಕಾರಿ ಮಂಜುಳಾ ಆತಂಕ ವ್ಯಕ್ತಪಡಿಸಿದರು.ಭರಮಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಬಹದ್ದೂರ್ ಘಟ್ಟ ಗ್ರಾಮದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಪ್ರತಿ ತಿಂಗಳು 10 ರಿಂದ 12 ಬಾಲ್ಯ ವಿವಾಹ ಪ್ರಕರಣ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಿವೆ. ಕಠಿಣವಾದ ಕಾನೂನುಗಳಿದ್ದರೂ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅರಿವಿನ ಕೊರತೆಯಿಂದ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಇಂತಹ ಸಾಮಾಜಿಕ ಪಿಡುಗಿನ ವಿರುದ್ಧ ನಾವೆಲ್ಲರೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಮಕ್ಕಳ ರಕ್ಷಣೆಗೆ ವಿಶೇಷ ಮಕ್ಕಳ ಪೊಲೀಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದೆ ಹಾಗೂ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೋ ಕಾಯಿದೆ ಇದೆ. ಮಕ್ಕಳಿಗೆ ತೊಂದರೆ ಆದರೆ ಮಕ್ಕಳ ಸಹಾಯವಾಣಿ 1898/112 ದೂರವಾಣಿ ಮೂಲಕ ಮಾಹಿತಿ ತಿಳಿಸಬಹುದು ಎಂದು ಮಕ್ಕಳಿಗೆ ಮಕ್ಕಳ ರಕ್ಷಣಾ ವಿಷಯವಾಗಿ ಅರಿವು ಮೂಡಿಸಿದರು.ಆಪ್ತ ಸಮಾಲೋಚಕಿ ಶಿಲ್ಪಾ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಉದ್ದೇಶ ಮತ್ತು ಕರ್ತವ್ಯ ಬಗ್ಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ಮಕ್ಕಳ ರಕ್ಷಣಾ ವಿಷಯವಾಗಿ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಲೋಕೇಶ್ ನಾಯಕ್ ಮತ್ತು ಚಂದ್ರಕುಮಾರ್ ಹಾಗೂ ಎನ್ಎಸ್ಎಸ್ ಸ್ವಯಂ ಸೇವಕರು ಇದ್ದರು.