ಸಾರಾಂಶ
ಕೆ.ಎಂ. ಮಂಜುನಾಥ್
ಕನ್ನಡಪ್ರಭ ವಾರ್ತೆ ಬಳ್ಳಾರಿಗಣಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಪೋಕ್ಸೊ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯ ನಿರಂತರ ಕಾರ್ಯಾಚರಣೆ ನಡುವೆಯೂ ಬಾಲ್ಯದಲ್ಲಿಯೇ ಹೆಣ್ಣುಮಕ್ಕಳಿಗೆ ಮದುವೆ ಮಾಡುವ ಮೌಢ್ಯತೆಯಿಂದ ಜನರು ಹೊರಬಂದಿಲ್ಲ. ಏತನ್ಮಧ್ಯೆ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಆತಂಕ ಮೂಡಿಸುವಷ್ಟು ಏರಿಕೆ ಕಂಡಿದೆ. ಬಾಲ್ಯವಿವಾಹ ಹಾಗೂ ಪೋಕ್ಸೊ ಪ್ರಕರಣಕ್ಕೆ ನಂಟಿರುವುದು ಗಮನಾರ್ಹ ಸಂಗತಿಯಾಗಿದೆ!ಕಳೆದ ಎರಡೂವರೆ ವರ್ಷಗಳಲ್ಲಿ 245 ಬಾಲ್ಯ ವಿವಾಹದ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 19 ಪ್ರಕರಣಗಳು ದಾಖಲಾಗಿವೆ. ಇದೇ ಸಮಯದಲ್ಲಿ 141 ಪೋಕ್ಸೊ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಧಿಕಾರಿಗಳೇ ಹೇಳುವಂತೆ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿಯೇ ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿವೆ. ನಿರಂತರ ಕಾರ್ಯಾಚರಣೆ ನಡುವೆಯೂ ಕದ್ದುಮುಚ್ಚಿ ಸಣ್ಣ ವಯಸ್ಸಿನಲ್ಲಿಯೇ ಬಾಲಕಿಯರಿಗೆ ಮದುವೆ ಮಾಡಲಾಗುತ್ತಿದೆ. ತೆರೆಮರೆಯಲ್ಲಿ ನಡೆಯುವ ಮದುವೆಗಳ ನಿಯಂತ್ರಣ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬಾಲ್ಯವಿವಾಹಕ್ಕೆ ಬ್ರೇಕ್:2021- 22ನೇ ಸಾಲಿನಲ್ಲಿ ಜಿಲ್ಲೆಯ ಐದು ತಾಲೂಕುಗಳ ಪೈಕಿ 87 ಬಾಲ್ಯ ವಿವಾಹಗಳು ವರದಿಯಾಗಿದ್ದು, ಈ ಪೈಕಿ 8 ಬಾಲ್ಯವಿವಾಹ ನಡೆದಿರುವ ಪ್ರಕರಣ ದಾಖಲಾಗಿವೆ. 2022- 23ರ ಸಾಲಿನ ಏಪ್ರಿಲ್ 22ರಿಂದ ಮಾರ್ಚ್ 23ರ ವರೆಗೆ 117 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. 7 ಬಾಲ್ಯವಿವಾಹಗಳು ನಡೆದಿವೆ. ಪ್ರಸಕ್ತ ವರ್ಷದ ಕಳೆದ ಏಳು ತಿಂಗಳಲ್ಲಿ (ಮಾ. 24ರಿಂದ ಸೆ. 30ರ ವರೆಗೆ) 41 ಬಾಲ್ಯ ವಿವಾಹಗಳು ವರದಿಯಾಗಿವೆ. 4 ವಿವಾಹಗಳು ನಡೆದು, ತಪ್ಪಿತಸ್ಥರ ವಿರುದ್ಧ ದೂರು ದಾಖಲಾಗಿದೆ. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 245 ಬಾಲ್ಯ ವಿವಾಹಕ್ಕೆ ಯತ್ನಿಸಿರುವುದು ವರದಿಯಾಗಿದ್ದು, ಈ ಪೈಕಿ 19 ವಿವಾಹಗಳು ನಡೆದು, ವಿವಾಹಕ್ಕೆ ಕಾರಣರಾದವರ ವಿರುದ್ಧ ಬಾಲ್ಯವಿವಾಹ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚಿಕ್ಕ ವಯಸ್ಸಿನ ಮಕ್ಕಳಿಗೆ ಮದುವೆ ಮಾಡುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿರುವ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಹುತೇಕ ಬಾಲ್ಯವಿವಾಹಗಳನ್ನು ತಡೆದಿದ್ದಾರೆ. ಆದರೆ, ಬಾಲ್ಯವಿವಾಹ ನಡೆಸುವ ಮನೋಸ್ಥಿತಿಯಿಂದ ಜನರು ಹೊರಬಂದಿಲ್ಲ ಎಂಬುದು ಗಮನಾರ್ಹ. ನಿರಂತರ ದಾಳಿ ಹಾಗೂ ಕಾನೂನು ಕ್ರಮದ ಎಚ್ಚರಿಕೆ ನಡುವೆ ಗ್ರಾಮೀಣರು ಬಾಲ್ಯವಿವಾಹಕ್ಕೆ ಮೊರೆ ಹೋಗುತ್ತಿರುವುದು ಜಿಲ್ಲೆಯಲ್ಲಿ ಕಂಡುಬಂದಿದೆ.
ಪೋಕ್ಸೊ ಪ್ರಕರಣಕ್ಕೆ ಆಸ್ಪದ:ಲೈಂಗಿಕ ಅಪರಾಧಗಳ ಮಕ್ಕಳ ಸಂರಕ್ಷಣಾ ಅಧಿನಿಯಮ (ಪೋಕ್ಸೊ) ಪ್ರಕರಣಗಳು 2020- 21ರಲ್ಲಿ ಜಿಲ್ಲೆಯಲ್ಲಿ ಒಟ್ಟು 70 ದಾಖಲಾಗಿವೆ.
2021- 22ರಲ್ಲಿ 41 ಹಾಗೂ 2022- 23ನೇ ಸಾಲಿನಲ್ಲಿ 30 ಪ್ರಕರಣಗಳು ಸೇರಿದಂತೆ ಕಳೆದ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 141 ಪ್ರಕರಣಗಳು ಪೋಕ್ಸೊ ಕಾಯ್ದೆಯಡಿ ದಾಖಲಾಗಿವೆ. 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಪ್ರಚೋದನೆ ಸೇರಿದಂತೆ ಬಾಲಕಿಯರ ಮದುವೆಯಾದವರ ವಿರುದ್ಧವೂ ಪೋಕ್ಸೊ ಪ್ರಕರಣ ದಾಖಲಾಗಿಸಲಾತ್ತಿದ್ದು, ಜಿಲ್ಲೆಯಲ್ಲಿ 6 ವರ್ಷದ ಬಾಲಕಿಯಿಂದ ಹಿಡಿದು 17 ವರ್ಷದೊಳಗಿನ ವಿವಿಧ ವಯೋಮಾನದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಹೆಚ್ಚಿನ ಪ್ರಕರಣಗಳಲ್ಲಿ ಪ್ರೇಮಸಂಬಂಧಗಳು ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣ ಹಂತದಲ್ಲಿ ನಡೆಯುವ ಪ್ರೇಮ ಸಂಬಂಧಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಆಸ್ಪದ ಒದಗಿಸಿದೆ ಎಂದು ತಿಳಿದುಬಂದಿದೆ.ನಿಯಂತ್ರಣ: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿರುವುದು ನಿಜ. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿ ತಡೆಯುತ್ತಿದ್ದೇವೆ. ಹೀಗಾಗಿ ಭಾಗಶಃ ವಿವಾಹಗಳನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಶಾಲಾ- ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದು ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ರಾಮಕೃಷ್ಣ ನಾಯಕ ತಿಳಿಸಿದರು.