ಸಾರಾಂಶ
ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರು ಸೂರ್ಯೋದಯ, ಸೂರ್ಯಾಸ್ತಮಾನ ವೀಕ್ಷಣೆಗೂ ಆಸಕ್ತಿ ವಹಿಸುತ್ತಿದ್ದಾರೆ.
ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರು ಸೂರ್ಯೋದಯ, ಸೂರ್ಯಾಸ್ತಮಾನ ವೀಕ್ಷಣೆಗೂ ಆಸಕ್ತಿ ವಹಿಸುತ್ತಿದ್ದಾರೆ. ಹಾಗಾಗಿ ಪ್ರವಾಸಿ ಮಾರ್ಗದರ್ಶಿಗಳು ಸ್ಮಾರಕಗಳ ವೀಕ್ಷಣೆ ಜತೆಗೆ ಸೂರ್ಯೋದಯ, ಸೂರ್ಯಾಸ್ತಮಾನ ವೀಕ್ಷಣೆಗೂ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ.
ಹಂಪಿಯ ಮಾರ್ತಂಗ ಪರ್ವತ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಇನ್ನೊಂದೆಡೆ ಹೇಮಕೂಟ ಪ್ರದೇಶದಲ್ಲಿ ಸೂರ್ಯಾಸ್ತಮಾನ ವೀಕ್ಷಣೆಗೆ ಪ್ರವಾಸಿಗರು ಬರುತ್ತಿದ್ದಾರೆ. ಹಂಪಿಗೆ ಆಗಮಿಸುವ ಪ್ರವಾಸಿಗರು ಶ್ರೀವಿರೂಪಾಕ್ಷೇಶ್ವರ ದೇವಾಲಯ, ಬಸವಣ್ಣ ಮಂಟಪ, ಸಾಲು ಮಂಟಪಗಳು, ಕಲ್ಲಿನತೇರು, ವಿಜಯ ವಿಠ್ಠಲ ದೇವಾಲಯ, ಸಾಸಿವೆಕಾಳು ಗಣಪತಿ, ಪುರಂದರ ಮಂಟಪ, ಮಹಾನವಮಿ ದಿಬ್ಬ, ಕಡಲೆಕಾಳು ಗಣಪತಿ ಮಂಟಪ, ಶ್ರೀಕೃಷ್ಣ ದೇವಾಲಯ, ನೆಲಸ್ತರದ ಶಿವ ದೇವಾಲಯ, ಹಜಾರ ರಾಮ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ಪಟ್ಟಾಭಿರಾಮ ದೇಗುಲ, ಕಮಲ ಮಹಲ್, ಗಜಶಾಲೆ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸುವ ಪ್ರವಾಸಿಗರು; ಸಂಜೆ ಹೊತ್ತಿನಲ್ಲಿ ಸೂರ್ಯಾಸ್ತಮಾನ ವೀಕ್ಷಣೆ ಮಾತ್ರ ತಪ್ಪಿಕೊಳ್ಳುತ್ತಿಲ್ಲ. ಇನ್ನು ಬೆಳಗ್ಗೆ ಸೂರ್ಯೋದಯದ ವೀಕ್ಷಣೆಗೂ ಪ್ರವಾಸಿಗರು ಹಾತೊರೆಯುತ್ತಿದ್ದಾರೆ.ಪ್ರವಾಸಿಗರು ಹಂಪಿಯ ಕಲ್ಲು ಬಂಡೆಯಿಂದ ಆವೃತವಾಗಿರುವ ಸ್ಥಳಗಳಲ್ಲಿ ಕುಳಿತು ಸೂರ್ಯೋದಯ, ಸೂರ್ಯಾಸ್ತಮಾನ ವೀಕ್ಷಿಸುತ್ತಿದ್ದಾರೆ. ಹೇಮಕೂಟದಲ್ಲಿ ಸೂರ್ಯಾಸ್ತಮಾನ ವೀಕ್ಷಣೆಗೆ ಕಲ್ಲುಹಾಸುಗಳ ವ್ಯವಸ್ಥೆ ಮಾಡಲಾಗಿದೆ. ಬಡವಿಲಿಂಗ ಹಾಗೂ ಸಾಸಿವೆಕಾಳು ಗಣಪತಿ, ಉಗ್ರ ನರಸಿಂಹ ಸ್ಮಾರಕಗಳನ್ನು ಇಳಿ ಹೊತ್ತಿನಲ್ಲಿ ವೀಕ್ಷಿಸುವ ಪ್ರವಾಸಿಗರು ಹೇಮಕೂಟದಲ್ಲಿ ಸೂರ್ಯಾಸ್ತಮಾನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ ಎಂದು ಹೇಳ್ತಾರೆ ಪ್ರವಾಸಿ ಮಾರ್ಗದರ್ಶಿಗಳು.