ರೈತ ಬಂಡಾಯದ ಊರಿನಲ್ಲಿ ಕೃಷಿ ಹೊಂಡಕ್ಕೆ ಹೆಚ್ಚಿದ ಬೇಡಿಕೆ

| Published : Jan 07 2024, 01:30 AM IST

ರೈತ ಬಂಡಾಯದ ಊರಿನಲ್ಲಿ ಕೃಷಿ ಹೊಂಡಕ್ಕೆ ಹೆಚ್ಚಿದ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಮಳೆ ಕೈಕೊಟ್ಟು ಬರಗಾಲ ಆವರಿಸಿದ್ದರಿಂದ ಕಂಗಾಲಾಗಿರುವ ನರಗುಂದ ತಾಲೂಕಿನ ರೈತರು ಕೃಷಿ ಭಾಗ್ಯ ಯೋಜನೆಯಡಿ 400 ರೈತರು ಕೃಷಿ ಹೊಂಡಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಈ ಬಾರಿ ಮಳೆ ಕೈಕೊಟ್ಟು ಬರಗಾಲ ಆವರಿಸಿದ್ದರಿಂದ ಕಂಗಾಲಾಗಿರುವ ತಾಲೂಕಿನ ರೈತರು ಕೃಷಿ ಭಾಗ್ಯ ಯೋಜನೆಯಡಿ 400 ರೈತರು ಕೃಷಿ ಹೊಂಡಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಸಕ್ತ ವರ್ಷ ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆಯಾಗಿಲ್ಲ, ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ ಬೆಳೆ ಕೂಡ ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಒಣಗಿ ಹೋಗಿದ್ದರಿಂದ ರೈತರಿಗೆ ದಿಕ್ಕು ತೋಚದೇ ಕಡಿಮೆ ಮಳೆಯಾದರೆ ಕೃಷಿ ಹೊಂಡ ಕೈ ಹಿಡಿಯುವುದು ಎಂದು ರೈತರು ಸರ್ಕಾರದ ಕೃಷಿ ಭಾಗ್ಯ ಯೋಜನೆ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ.

ಕೃಷಿ ಹೊಂಡಕ್ಕೆ 400 ಅರ್ಜಿಗಳು:ಸರ್ಕಾರ ಪ್ರಸಕ್ತ ವರ್ಷ ಈ ತಾಲೂಕಿಗೆ 60-40 ಅಳತೆಯ 70 ಕೆರೆಗಳನ್ನು ಮಾತ್ರ ನಿರ್ಮಿಸಿಕೊಳ್ಳಲು ಅನುಮತಿ ನೀಡಿದೆ. ಆದರೆ ಕೃಷಿ ಹೊಂಡ ಮಾಡಿಸಿಕೊಳ್ಳಲು ನರಗುಂದ ಮತ್ತು ಕೊಣ್ಣೂರ ರೈತ ಸಂಪರ್ಕ ಕೇಂದ್ರಗಳಲ್ಲಿ ತಾಲೂಕಿನ ರೈತರು ಒಟ್ಟು 400 ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಸರ್ಕಾರದಿಂದ ಮಂಜೂರಾದ 70 ಕೃಷಿ ಹೊಂಡಗಳಲ್ಲಿ 53 ಸಾಮಾನ್ಯ ವರ್ಗಕ್ಕೆ, 12 ಎಸ್ಸಿ, 5 ಎಸ್ಟಿ ವರ್ಗಕ್ಕೆ ಮೀಸಲಾಗಿವೆ.

ಲಾಟರಿ ಮೂಲಕ ಆಯ್ಕೆ:ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಕೃಷಿ ಹೊಂಡ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ರೈತರು ಕೃಷಿ ಹೊಂಡ ತೆಗೆಸಿಕೊಳ್ಳಲು ಹೆಚ್ಚಿಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ತಾಲೂಕು ಸಹಾಯಕ ನಿರ್ದೇಶಕ ಗುರುನಾಥ ಹೇಳಿದರು.

ಬಯಲು ಸೀಮೆಯ ನಾಡಿನ ರೈತರಿಗೆ ಪದೇ ಪದೇ ಬರಗಾಲ ಕಾಡುತ್ತಿದೆ, ಆದ್ದರಿಂದ ಸರ್ಕಾರ ಆಸಕ್ತಿ ಇರುವ ಎಲ್ಲಾ ರೈತರ ಜಮೀನುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ರಾಜ್ಯ ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.