ಬೇಸಿಗೆ ಬಿಸಿಲಿಗೆ ಲಿಂಬೆಹಣ್ಣಿಗೆ ಡಂಬಳದಲ್ಲಿ ಹೆಚ್ಚಿದ ಬೇಡಿಕೆ

| Published : Mar 05 2025, 12:32 AM IST

ಬೇಸಿಗೆ ಬಿಸಿಲಿಗೆ ಲಿಂಬೆಹಣ್ಣಿಗೆ ಡಂಬಳದಲ್ಲಿ ಹೆಚ್ಚಿದ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಬಿಸಿಲಿನ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿಡಲು ಜನರು ಪರದಾಡುತ್ತಿದ್ದಾರೆ. ಜನರು ಹೆಚ್ಚಾಗಿ ಪಾನಕ, ಜ್ಯೂಸ್‌ಗಳ ಮೊರೆ ಹೋಗುತ್ತಿದ್ದು, ಸಹಜವಾಗಿಯೇ ಲಿಂಬೆಹಣ್ಣಿಗೆ ಭಾರೀ ಬೇಡಿಕೆ ಬಂದಿದೆ.

ರಿಯಾಜ‌ಅಹ್ಮದ ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಬೇಸಿಗೆ ಬಿಸಿಲಿನ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿಡಲು ಜನರು ಪರದಾಡುತ್ತಿದ್ದಾರೆ. ಜನರು ಹೆಚ್ಚಾಗಿ ಪಾನಕ, ಜ್ಯೂಸ್‌ಗಳ ಮೊರೆ ಹೋಗುತ್ತಿದ್ದು, ಸಹಜವಾಗಿಯೇ ಲಿಂಬೆಹಣ್ಣಿಗೆ ಭಾರೀ ಬೇಡಿಕೆ ಬಂದಿದೆ.

ಕಲ್ಲಂಗಡಿ ಸೇರಿದಂತೆ ದೇಹಕ್ಕೆ ತಂಪು ನೀಡುವ ಹಣ್ಣುಗಳ ಬೆಲೆ ಹೆಚ್ಚಾಗಿದ್ದರೂ ಲಿಂಬೆಹಣ್ಣಿನ ಬೆಲೆ ನೂರು ಹಣ್ಣಿಗೆ ₹500 ರಿಂದ ₹600 ಗೆ. ಮಾರಾಟವಾಗುತ್ತಿದೆ. ಮುಂಡರಗಿ ತಾಲೂಕಿನಲ್ಲಿ ಮಾರ್ಚ್‌ ತಿಂಗಳಲ್ಲಿಯೇ ಮಧ್ಯಾಹ್ನ ಉಷ್ಣಾಂಶ 35ರಿಂದ 36 ಡಿಗ್ರಿವರೆಗೆ ತಲುಪುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಸಿಲಿಗೆ ಬಾಣಂತಿಯರು, ಗರ್ಭೀಣಿಯರು, ವಯೋವೃದ್ಧರು, ಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಜ್ಯೂಸ್ ಅಂಗಡಿಗಳಿಗೆ ಬರುವ ಗ್ರಾಹಕರು, ಲಿಂಬೆ ಹಣ್ಣಿನ ಜ್ಯೂಸ್‌ಗಳನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ ಒಂದು ಲಿಂಬೆಹಣ್ಣಿನ ಬೆಲೆ ₹6ರಿಂದ ₹8 ಇದೆ. ಈ ಹಿನ್ನೆಲೆಯಲ್ಲಿ ಜ್ಯೂಸ್‌ ಅಂಗಡಿಯವರು ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ನಿಂಬೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ.

ಬೇಸಿಗೆ ಬಂತೆಂದರೆ ಸಾಕು ಮನುಷ್ಯನ ಆರೋಗ್ಯದಲ್ಲಿ ಹಲವು ರೀತಿಯಲ್ಲಿ ಏರುಪೇರು ಉಂಟಾಗುತ್ತದೆ. ಪ್ರಮುಖವಾಗಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಆದಷ್ಟು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು.

ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೂಡ, ಮಾರುಕಟ್ಟೆಯಲ್ಲಿ ಸಿಗುವ ಕೃತಕ ಸಕ್ಕರೆ ಅಂಶ ಇರುವ ತಂಪು ಪಾನೀಯಗಳ ಮೊರೆ ಹೋಗಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವ ಜೊತೆಗೆ ಮಧುಮೇಹದಂತಹ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ. ಜ್ಯೂಸ್ ಅಂಗಡಿಗಳಲ್ಲಿ ಲಿಂಬು ಸೋಡಾ, ಲಸ್ಸಿ, ಮಜ್ಜಿಗೆ, ಎಳೆನೀರು, ಹಣ್ಣುಗಳ ಜ್ಯೂಸ್ ಕುಡಿಯಬೇಕು. ಇಲ್ಲವಾದರೆ ಇದರ ಬದಲು ಮನೆಯಲ್ಲಿಯೇ ಸಿದ್ಧ ಮಾಡಿದ ಲಿಂಬೆ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.ಇದಕ್ಕೆ ಪ್ರಮುಖ ಕಾರಣ ಲಿಂಬೆಹಣ್ಣಿನಲ್ಲಿ ಕಂಡು ಬರುವ ಸಿಟ್ರಿಕ್ ಆಮ್ಲ ಹಾಗೂ ವಿಟಮಿನ್ ಸಿ ಅಂಶ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಬಿಸಿಲಿನಲ್ಲಿ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಯಸ್ಸಾದವರು ಮತ್ತು ಮಕ್ಕಳು ಹೊರಗಡೆ ಹೋಗಬಾರದು. ತಂಪು ಪಾನೀಯಗಳಿಗೆ ಮೊರೆ ಹೋಗದೆ ಲಿಂಬೆಹಣ್ಣು, ಹಣ್ಣಿನ ಜ್ಯೂಸ್‌, ಎಳನೀರು ಕುಡಿಯಬೇಕು. ಬಿಸಿಲಿನ ಸಮಸ್ಯೆಯ ಪರಿಹಾರಕ್ಕೆ ಗಿಡಗಳನ್ನು ಹಚ್ಚಲು ಪ್ರತಿಯೊಬ್ಬರೂ ಮುಂದಾಗಬೇಕು. ಬಿಸಿಲಿನಲ್ಲಿ ವೃದ್ಧರಿಗೆ ಮತ್ತು ಮಕ್ಕಳಿಗೆ ನೀರನ್ನು ಕುಡಿಸುತ್ತಿರಬೇಕು ಒಂದು ವೇಳೆ ಮಕ್ಕಳಲ್ಲಿ ನಿರ್ಜಲೀಕರಣ ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.

ಮುಂದಿನ ಪೀಳಿಗೆಗೆ ಗಿಡಗಳನ್ನು ಬೆಳೆಸುವುದರ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ತಗ್ಗಿಸಲು ಸಾಧ್ಯ. ಗಿಡಗಳ ಬೆಳೆಸಲು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಹಕಾರ ನೀಡಿ ಮುಂಡರಗಿ ತಾಲೂಕು ಕಪ್ಪತ್ತಗುಡ್ಡ ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ ಹೇಳಿದರು.