ಸಾರಾಂಶ
ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿದೆ. ಈಗ ತುರ್ತಾಗಿ ಬೆಳೆಗೆ ಯೂರಿಯಾ ಗೊಬ್ಬರ ನೀಡಬೇಕಿದೆ. ಆದರೆ, ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ ಎಂಬ ಅಳಲು ತಾಲೂಕಿನ ಎಲ್ಲೆಡೆಯೂ ರೈತರಿಂದ ಕೇಳಿ ಬರುತ್ತಿದೆ.
ಯೂರಿಯಾ ರಸಗೊಬ್ಬರ ಅಗತ್ಯವಿರುವಷ್ಟು ದೊರೆಯುತ್ತಿಲ್ಲ
ನ್ಯಾನೋ ಬಳಕೆ ಕುರಿತು ಕೃಷಿ ಇಲಾಖೆ ಜಾಗೃತಿ ಮೂಡಿಸಲಿವಿ.ಎಂ. ನಾಗಭೂಷಣಕನ್ನಡಪ್ರಭ ವಾರ್ತೆ ಸಂಡೂರು
ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿದೆ. ಈಗ ತುರ್ತಾಗಿ ಬೆಳೆಗೆ ಯೂರಿಯಾ ಗೊಬ್ಬರ ನೀಡಬೇಕಿದೆ. ಆದರೆ, ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ ಎಂಬ ಅಳಲು ತಾಲೂಕಿನ ಎಲ್ಲೆಡೆಯೂ ರೈತರಿಂದ ಕೇಳಿ ಬರುತ್ತಿದೆ.ಗೊಬ್ಬರದ ಅಂಗಡಿಗಳ ಮುಂದೆ ರೈತರು ಯೂರಿಯಾ ಗೊಬ್ಬರಕ್ಕಾಗಿ ಮಳೆ, ಬಿಸಿಲೆನ್ನದೆ ಕಾದು ಕುಳಿತುಕೊಂಡಿರುವ ದೃಶ್ಯ ಗಮನಿಸಿದರೆ, ಯೂರಿಯಾ ಗೊಬ್ಬರದ ಅಗತ್ಯತೆ ಎದ್ದು ಕಾಣುತ್ತಿದೆ.
ಈ ಬಾರಿ ಉತ್ತಮ ಮಳೆಯಾಗಿದೆ. ಬೆಳೆಗಳೂ ಚೆನ್ನಾಗಿವೆ. ಈಗ ಬೆಳೆಗಳಿಗೆ ಗೊಬ್ಬರ ಕೊಡಬೇಕಿದೆ. ಆದರೆ, ಯೂರಿಯಾ ರಸಗೊಬ್ಬರ ಅಗತ್ಯವಿರುವಷ್ಟು ದೊರೆಯುತ್ತಿಲ್ಲ. ಎಕರೆಗೆ ೨ ಚೀಲ ಯೂರಿಯಾ ಬೇಕು. ಆದರೆ, ಒಬ್ಬ ರೈತರಿಗೆ ಒಂದು ಚೀಲ ಯೂರಿಯಾ ಗೊಬ್ಬರ ಕೊಡುತ್ತಿದ್ದಾರೆ. ಅದಕ್ಕೂ ಕಾಯಬೇಕಿದೆ. ನಾಲ್ಕೈದು ಎಕರೆ ಇದ್ದರೆ, ಒಂದು ಚೀಲ ಗೊಬ್ಬರ ಸಾಕಾಗದು ಎನ್ನುತ್ತಾರೆ ಸಂಡೂರಿನ ಗೊಬ್ಬರದ ಅಂಗಡಿಯ ಮುಂದೆ ನಿಂತಿದ್ದ ರೈತರಾದ ಜಿಗೇನಹಳ್ಳಿಯ ರಾಜಶೇಖರ ಪಾಟೀಲ್, ಕಾಟಿನಕಂಬದ ಎ. ಮರಿಸ್ವಾಮಿ, ಭುಜಂಗನಗರದ ಚನ್ನಬಸಪ್ಪ, ಸಂಡೂರಿನ ಮಂಜುನಾಥ, ದೌಲತ್‌ಪುರದ ವಿ.ಜೆ. ಶ್ರೀಪಾದಸ್ವಾಮಿ.ಕೆಲವು ಕಡೆಗಳಲ್ಲಿ ಆಧಾರ್ ಕಾಡ್ ತೋರಿಸಿದರೆ ಯೂರಿಯಾ ಗೊಬ್ಬರ ಕೊಡುತ್ತಿದ್ದರು. ಮನೆಯಲ್ಲಿ ನಾಲ್ಕೈದು ಆಧಾರ್ ಕಾರ್ಡ್ ಇರುವುದನ್ನು ಗಮನಿಸಿ, ಇದೀಗ ಕೆಲವೆಡೆ ರೇಷನ್ ಕಾರ್ಡ್ ತೆಗೆದುಕೊಂಡು ಹೋಗಬೇಕಿದೆ. ಕೆಲವು ಕಡೆಗಳಲ್ಲಿ ಅಂಗಡಿಗಳಿಗೆ, ಸೊಸೈಟಿಗಳಿಗೆ ೨೫೦-೩೦೦ ಚೀಲ ಗೊಬ್ಬರ ಬಂದರೆ, ಅಲ್ಲಿ ೫೦೦-೧೦೦೦ ರೈತರು ಇರುತ್ತಾರೆ. ಗೊಬ್ಬರ ಬಂದರೂ, ಅದರ ವಿತರಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.
ಅಧಿಕಾರಿಗಳು ನ್ಯಾನೋ ಗೊಬ್ಬರ ಬಳಸಲು ಹೇಳುತ್ತಾರೆ. ಇಲಾಖೆಯವರು ನ್ಯಾನೋ ಯೂರಿಯಾ ಗೊಬ್ಬರ ಬಳಕೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಿ, ಅದರ ಪರಿಣಾಮದ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕಿದೆ. ಕೆಲವು ಕಡೆ ಖಾಸಗಿಯವರು ಡ್ರೋನ್ ಮೂಲಕ ಒಂದು ಎಕರೆಗೆ ₹೩೦೦ರಂತೆ ಪಡೆದು ನ್ಯಾನೋ ಯೂರಿಯಾ ಸಿಂಪಡಣೆ ಮಾಡಿದ್ದಾರೆ. ರೈತರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೃಷಿ ಇಲಾಖೆಯವರು ಇಲಾಖೆಯಿಂದ ಡ್ರೋನ್ ತರಿಸಿ, ಅದರ ಮೂಲಕ ಸ್ವಲ್ಪ ಕಡಿಮೆ ಖರ್ಚಿನಲ್ಲಿ ನ್ಯಾನೋ ಯೂರಿಯಾ ಬಳಸುವ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರೆ, ರೈತರು ನ್ಯಾನೋ ಯೂರಿಯಾ ಬಳಸಲು ಮುಂದಾಗಬಹುದು. ಇಲಾಖೆಯವರು ಈ ಕುರಿತು ಕ್ರಮಕೈಗೊಳ್ಳಬೇಕಿದೆ. ಇದರಿಂದ ಯೂರಿಯಾ ಗೊಬ್ಬರದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ. ವೀರೇಶ್ ತಿಳಿಸಿದ್ದಾರೆ.ಒಟ್ಟಿನಲ್ಲಿ ನ್ಯಾನೋ ಯುರಿಯಾದ ಬಗ್ಗೆ ರೈತರಲ್ಲಿ ನಂಬಿಕೆ ಬಂದು ಅದನ್ನು ಬಳಸಲು ಮುಂದಾದರೆ, ಈಗಿರುವ ಯೂರಿಯಾ ಗೊಬ್ಬರದ ಸಮಸ್ಯೆಗೆ ಪರಿಹಾರ ದೊರೆಯಲಿದೆ.