ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಶುಕ್ರವಾರ ‘ಡ್ರೈ ಡೇ’ ಆಚರಿಸಲಾಯಿತು. ಜತೆಗೆ, ಮನೆ ಮನೆ ಭೇಟಿ ನೀಡಿ ಡೆಂಘೀ ಕುರಿತು ಸರ್ವೇ ಹಾಗೂ ಜನ ಜಾಗೃತಿಗೆ ಚಾಲನೆ ನೀಡಲಾಗಿದೆ.
ನೀರಿನ ಸಂಪ್, ಡ್ರಮ್, ನಲ್ಲಿ ಬಳಿ, ಹೂವಿನ ಕುಂಡ ಸೇರಿದಂತೆ ಇನ್ನಿತರೆ ಕಡೆ ಪರಿಶೀಲಿಸಿ ವಾರಕ್ಕೊಮ್ಮೆ ಎಲ್ಲಾ ಕಡೆ ನೀರನ್ನು ಹೊರ ಹಾಕಿ ಒಣಗಿಸಿ ಮತ್ತೆ ಶುದ್ಧ ನೀರು ಸಂಗ್ರಹಿಸಿಕೊಳ್ಳುವ ಡ್ರೈ ಡೇ ಆಚರಣೆ ಮಾಡಲಾಯಿತು. ಪ್ರತಿ ಶುಕ್ರವಾರ ಡ್ರೈ ಡೇ ಆಚರಣೆ ಮಾಡುವಂತೆ ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಒಂದು ವಾರಕ್ಕಿಂತ ಹೆಚ್ಚು ದಿನಗಳು ಒಂದೇ ನೀರು ಶೇಖರಣೆಯಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ತಪ್ಪದೆ ಹಳೆ ನೀರು ತೆಗೆದು ಹೊಸ ನೀರು ತುಂಬಿಸಿಕೊಳ್ಳಲು ಜನರಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿ ಸಿಬ್ಬಂದಿ ಮನವಿ ಮಾಡಿದರು.
ಮನೆ ಮನೆ ಸರ್ವೇ ಶುರು
ಡೆಂಘೀ ಹರಡುವ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಬಿತ್ತಿಪತ್ರಗಳನ್ನು ವಿತರಿಸಿದರು. ಜತೆ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿರುವ ಕಡೆ ಔಷಧಿ ಸಿಂಪಡಣೆ ಮಾಡಿ ಸೊಳ್ಳೆಗಳ ಉತ್ಪತ್ತಿ ತಾಣವನ್ನು ನಿಯಂತ್ರಿಸಬೇಕೆಂದು ಜಾಗೃತಿ ಮೂಡಿಸುತ್ತಿದ್ದಾರೆ. ಈ ವೇಳೆ ಯಾರಿಗಾದರೂ ಜ್ವರ ಕಂಡು ಬಂದರೆ ದಾಖಲು ಮಾಡಿಕೊಂಡು ಡೆಂಘೀ ಪರೀಕ್ಷೆಗೆ ಒಳಗಾಗುವಂತೆ ಮಾರ್ಗದರ್ಶನ ಮಾಡಲಾಗುತ್ತಿದೆ.
ಶುಕ್ರವಾರ ನಗರದಲ್ಲಿ 18 ಸಾವಿರ ಮನೆ-ಮನೆ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ 3470 ಲಾರ್ವಾ ಉತ್ಪತ್ತಿಯಾಗುವ ಸಾಧ್ಯತೆ ಇರುವ ಸ್ಥಳ ಗುರುತಿಸಲಾಗಿದೆ. 2,804 ಕಡೆ ಡ್ರಮ್, ಹೂಕುಂಡ, ಹಳೇ ಟಯರ್ ಸೇರಿದಂತೆ ಮೊದಲಾದ ಕಡೆ ಸ್ವಚ್ಛಗೊಳಿಸಲಾಗಿದೆ.
ಮುಖ್ಯ ಆಯುಕ್ತರಿಂದ ಪರಿಶೀಲನೆ:
ಪೂರ್ವ ವಲಯ ಸಿ.ವಿ.ರಾಮನ್ ನಗರದ ಜಿ.ಎಂ.ಪಾಳ್ಯ ಹಾಗೂ ನ್ಯೂ ತಿಪ್ಪಸಂದ್ರ ವ್ಯಾಪ್ತಿಯಲ್ಲಿ ಮನೆ-ಮನೆ ಭೇಟಿ ನೀಡಿ ಡೆಂಘೀ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಯಲಹಂಕ ವಲಯ ಆಯುಕ್ತರು, ಶಾಲೆಗೆ ಭೇಟಿ ನೀಡಿ, ಮನೆಯಲ್ಲಿ ವಾರಕ್ಕೊಮ್ಮೆ ನೀರು ಸ್ವಚ್ಛಮಾಡಬೇಕು, ಮನೆಗಳ ಸುತ್ತಲು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಅಕ್ಕ-ಪಕ್ಕದ ಮನೆಯವರಿಗೆ ಡೆಂಘೀ ಹರಡುವಿಕೆಯ ಬಗ್ಗೆ ತಿಳುವಳಿಕೆ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮೈಕ್ರೋ ಪ್ಲಾನ್ ಸೂಚನೆ:
ಡೆಂಘೀ ನಿಯಂತ್ರಣಕ್ಕೆ ಮೈಕ್ರೋ ಪ್ಲಾನ್ ಮಾಡಿಕೊಂಡು ಅದರ ಪ್ರಕಾರ ಕಾರ್ಯನಿವರ್ಹಿಸಬೇಕು. ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಫ್ರಿಸ್ಮ್-ಹೆಚ್ ತಂತ್ರಾಂಶದಲ್ಲಿ ಆಯಾ ದಿನವೇ ನಮೂದಿಸಬೇಕು. ಆಟೋಗಳಲ್ಲಿ ಧ್ವನಿವರ್ಧಕ ಅಳವಡಿಸಿಕೊಂಡು ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಿರುವ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಡೆಂಘೀ ಪ್ರಕರಣಗಳ ವಿವರ (ಜೂ.26)
ವಲಯಪರೀಕ್ಷೆದೃಢಪಟ್ಟ ಡೆಂಘೀ ಸಂಖ್ಯೆ
ಬೊಮ್ಮನಹಳ್ಳಿ374 - 138
ದಾಸರಹಳ್ಳಿ329 -8
ಪೂರ್ವ 2,091 - 398
ಮಹದೇವಪುರ866- 435
ಆರ್.ಆರ್ ನಗರ181- 97
ದಕ್ಷಿಣ1,993 - 230
ಪಶ್ಚಿಮ734 - 120
ಯಲಹಂಕ336 - 104
ಒಟ್ಟು6904 - 1,530