ಹೆಚ್ಚಾದ ಡೆಂಘೀ ಜ್ವರ : ಜಿಲ್ಲೆ ಜನತೆ ತತ್ತರ

| Published : Jul 07 2024, 01:27 AM IST

ಸಾರಾಂಶ

ಮುಂಗಾರು ಮಳೆ ಆರಂಭಗೊಂಡ ಬಳಿಕ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯಲ್ಲಿ ಡೆಂಘೀ ಜ್ವರ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅನುಕೂಲವಾಗಿದೆ. ಹಾಗಾಗಿ, ಡೆಂಘೀ ಜ್ವರ ಪ್ರಕರಣ ದಾಂಗುಡಿ ಇಟ್ಟಿದೆ. ಜೂನ್‌ ಒಂದೇ ತಿಂಗಳಲ್ಲೇ 68 ಡೆಂಘೀ ಪ್ರಕರಣಗಳು ದೃಢಪಟ್ಟಿವೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಂಗಾರು ಮಳೆ ಆರಂಭಗೊಂಡ ಬಳಿಕ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯಲ್ಲಿ ಡೆಂಘೀ ಜ್ವರ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅನುಕೂಲವಾಗಿದೆ. ಹಾಗಾಗಿ, ಡೆಂಘೀ ಜ್ವರ ಪ್ರಕರಣ ದಾಂಗುಡಿ ಇಟ್ಟಿದೆ. ಜೂನ್‌ ಒಂದೇ ತಿಂಗಳಲ್ಲೇ 68 ಡೆಂಘೀ ಪ್ರಕರಣಗಳು ದೃಢಪಟ್ಟಿವೆ.ಕಳೆದ ಜನವರಿಯಿಂದ ಜೂನ್‌ವರೆಗೆ 1490 ಜನರನ್ನು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 177 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೇ, ಇಬ್ಬರು ಡೆಂಘೀ ಜ್ವರದಿಂದ ಮೃತಪಟ್ಟಿರುವ ಶಂಕೆಯಿದೆ. ಆದರೆ, ಇವು ಇನ್ನೂ ದೃಢಪಟ್ಟಿಲ್ಲ. ಬೆಳಗಾವಿ, ಬೈಲಹೊಂಗಲ, ಖಾನಾಪುರ ಮತ್ತು ರಾಮದುರ್ಗ ತಾಲೂಕುಗಳಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿವೆ.ಜ್ವರ, ತಲೆನೋವು, ಸುಸ್ತು, ಕಣ್ಣಿನ ನೋವು, ಸಾಮಾನ್ಯವಾಗಿ ಕಣ್ಣುಗಳ ಹಿಂದೆ ನೋವು, ಹಸಿವಿನ ಕೊರತೆ, ಹೊಟ್ಟೆ ನೋವು, ವಾಂತಿ, ತುರಿಕೆ ಅಲ್ಲದ ದದ್ದುಗಳು ಮತ್ತು ಬಿಳಿ ರಕ್ತಕಣಗಳು ಕಡಿಮೆ ಆಗುವುದು ಡೆಂಘೀ ಲಕ್ಷಣಗಳು. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ. ಇದರಿಂದ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಇದುವರೆಗೆ ಏನಾಗಿದೆ?:

ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸೊಳ್ಳೆ ಉತ್ಪತ್ತಿ ತಾಣ ಪತ್ತೆ ಹಚ್ಚಿ ಲಾರ್ವಾಗಳ ಕೇಂದ್ರಗಳನ್ನು ನಾಶಪಡಿಸುವುದು, ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನ ಎಂದು ಮಾಡಲಾಗುತ್ತಿದೆ. ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಸೇರಿ ಇತರರು ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕುಡಿಯದೇ ಇರುವ ನೀರಿಗೆ ಲಾರ್ವಾ ನಾಶಕ ಔಷಧವನ್ನು ಹಾಕಲಾಗುತ್ತಿದೆ. ಹೆಚ್ಚು ಕೇಸ್‌ ಇರುವ ಕಡೆ, ಲಾರ್ವಾ ಇರುವ ಕಡೆಗಳಲ್ಲಿ ಫಾಗಿಂಗ್‌ ಮಾಡಿಸಲಾಗುತ್ತಿದೆ. ಜಲಮೂಲ, ಮನೆಯಲ್ಲಿನ ತೊಟ್ಟಿಗಳಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಯಾವುದೇ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸಿದರೂ ಈ ಪ್ರಭೇದದ ಮೀನು ನೀಡಲಾಗುತ್ತಿದೆ.ಲಾರ್ವಾ ಸರ್ವೇ, ಜ್ವರ ಇದ್ದವರಿಗೆ ರಕ್ತ ಪರೀಕ್ಷೆ ಹಾಗೂ ಡೆಂಘೀ ದೃಢವಾದರೆ ಮೆಡಿಸಿನ್, ಇಂಜೆಕ್ಷನ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಎನ್​ಎಚ್-1, ಐಜಿಎಂ, ಐಜಿಜಿ ಹೀಗೆ 3 ಪ್ರಕಾರ ಪರೀಕ್ಷೆ ಮಾಡಿದಾಗ, ಎನ್​ಎಚ್-1, ಐಜಿಎಂ ಕಂಡುಬಂದರೆ ಅಂಥ ರೋಗಿಗಳ ಮೇಲೆ 48 ಗಂಟೆ ನಿಗಾ ವಹಿಸುತ್ತೇವೆ. ಅಲ್ಲದೇ ಮೆಡ್ ಕಿಟ್ ನೋಡುತ್ತೇವೆ. ಹೀಗೆ ಈ 3 ಹಂತವನ್ನು ಸರಿಯಾಗಿ ರೋಗಿಗಳನ್ನು ನೋಡಿಕೊಂಡರೆ ಶೀಘ್ರವೇ ರೋಗಿಗಳು ಗುಣಮುಖರಾಗುತ್ತಾರೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡೆಂಘೀ ಪರೀಕ್ಷೆ ಸೌಲಭ್ಯವಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಶೀತ, ಜ್ವರ ಹೆಚ್ಚು:

ಕಲುಷಿತ ನೀರು ಸೇವನೆ ಮುಂತಾದ ಕಾರಣದಿಂದ ಜಿಲ್ಲೆಯಲ್ಲಿ ಕರುಳು ಬೇನೆ ರೋಗವೂ ವ್ಯಾಪಿಸಿದೆ. ನೂರಾರು ಜನರು ಕರಳು ಬೇನೆ ರೋಗದಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಸೇವನೆ, ಗಾಳಿಯಿಂದ ಸಾಂಕ್ರಾಮಿಕ ರೋಗಗಳು ಜಿಲ್ಲೆಯನ್ನು ಆಕ್ರಮಿಸುತ್ತಿವೆ. ವಿಷಮಶೀತ ಜ್ವರವೂ ಹೆಚ್ಚುತ್ತಿದೆ. ಅತಿಸಾರದಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ದಢಾರ್‌, ಕರುಳು ಬೇನೆಯಿಂದ ಅನೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು, ವೃದ್ಧರಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಳ್ಳುತ್ತಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.ತಾಲೂಕು ವಾರು ಡೆಂಘೀ ಪ್ರಕರಣ

ಬೆಳಗಾವಿ 46

ಖಾನಾಪುರ 32

ರಾಮದುರ್ಗ 25

ಬೈಲಹೊಂಗಲ 22

ಹುಕ್ಕೇರಿ 17

ಚಿಕ್ಕೋಡಿ 14

ಗೋಕಾಕ 7

ರಾಯಬಾಗ 6

ಸವದತ್ತಿ 6

ಅಥಣಿ 5

ಮೂರು ಹಂತದಲ್ಲಿ ಪರೀಕ್ಷೆ

ಡೆಂಘೀ ಪ್ರಕರಣದ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಡೆಂಘೀ ಪ್ರಕರಣ ಕಂಡುಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗಾದರೂ ಜ್ವರ ಬಂದರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣವೇ ಪರೀಕ್ಷೆ ಮಾಡಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲೇ ಡೆಂಘೀ ಜ್ವರದಿಂದ ಬಹುಬೇಗನೆ ಗುಣಮುಖವಾಗಬಹುದು. ತಡವಾಗಿ ಬಂದರೆ ಕಷ್ಟವಾಗುತ್ತದೆ. ರೋಗಿಗಳಿಗೆ ನಾವು ಮೂರು ಹಂತದಲ್ಲಿ ಪರೀಕ್ಷೆ ಮಾಡುತ್ತಿದ್ದೇವೆ.

-ಡಾ.ಮಹೇಶ ಕೋಣಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

-----ನಳದ ನೀರನ್ನು ಕಾಯಿಸಿ ಕುಡಿಯಿರಿ

ಬೆಳಗಾವಿ ನಗರದಲ್ಲಿ ಸಾರ್ವಜನಿಕರು ಬಾವಿ ಮತ್ತು ಬೋರವೆಲ್ ನೀರನ್ನು ಬಳಸುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಈಗಾಗಲೇ ನಗರದಲ್ಲಿ ಡೆಂಘೀ, ಕಾಮಾಲೆ ರೋಗಗಳು ದಾಖಲಾಗುತ್ತಿರುವುದರಿಂದ ತಮ್ಮ ಮನೆಗಳ ಸುತ್ತ ಮುತ್ತ ಚರಂಡಿಗಳಲ್ಲಿ, ಹಳೇ ಟೈರ್‌ಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಲು ಕೋರಲಾಗಿದೆ. ಅಲ್ಲದೇ ಪಾಲಿಕೆಯಿಂದ ಸರಬರಾಜು ಮಾಡುವ ನೀರನ್ನು ಕುಡಿಯಲು ಬಳಸಬೇಕು. ನಳದ ನೀರನ್ನೂ ಕೂಡ ಕಾಯಿಸಿ, ಆರಿಸಿ, ಸೋಸಿ ಕುಡಿಯಬೇಕು.

-ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ.