ಸಾರಾಂಶ
ಕವಿತೆಗಳು ವಸ್ತುವೊಂದರ ಧ್ಯಾನ, ತಪಸ್ಸಿನಿಂದ ಜನ್ಮ ತಾಳುತ್ತವೆ. ಇಂದಿನ ಬಹುಪಾಲು ಕವಿ, ಸಾಹಿತಿಗಳು ಜೀವಪರವಾಗಿ ಚಿಂತಿಸದೆ ಜಾತಿ ಕವಿಗಳಾಗಿದ್ದಾರೆ ಎಂದು ಕವಿ ಡಾ ಜಯಪ್ಪ ಹೊನ್ನಾಳಿ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಕವಿತೆಗಳು ವಸ್ತುವೊಂದರ ಧ್ಯಾನ, ತಪಸ್ಸಿನಿಂದ ಜನ್ಮ ತಾಳುತ್ತವೆ. ಇಂದಿನ ಬಹುಪಾಲು ಕವಿ, ಸಾಹಿತಿಗಳು ಜೀವಪರವಾಗಿ ಚಿಂತಿಸದೆ ಜಾತಿ ಕವಿಗಳಾಗಿದ್ದಾರೆ ಎಂದು ಕವಿ ಡಾ ಜಯಪ್ಪ ಹೊನ್ನಾಳಿ ತಿಳಿಸಿದರು.ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಲೇಖಕರ ಸಂಘವು ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವಿಗಳಿಗೆ ವಿಸ್ಮಯದ ಒಳಗಣ್ಣು ಇರಬೇಕು. ಹರಿಯುವ ಝರಿಯ ಜುಳುಜುಳು ನಾದ, ಬೀಸುವ ಗಾಳಿಗೆ ಜೀಕುವ ಮರಗಿಡಗಳ ನಿನಾದ, ಹಕ್ಕಿ ಪಕ್ಷಿಗಳು ಸ್ವಚ್ಛಂದವಾಗಿ ಹಾರಾಡುವಾಗ ಹೊಮ್ಮುವ ದನಿ, ಹೂ ಅರಳುವಾಗ ಘಮಿಸುವ ಬಗೆ ಇವೆಲ್ಲವೂ ಕವಿಗೆ ಮುಖ್ಯ. ಆ ಸಂಗತಿಗಳ ಜೊತೆ ಅನುಸಂಧಾನ ನಡೆಸುವ ತಾಳ್ಮೆ, ಸೂಕ್ಷ್ಮತೆ ಕವಿಗಿರಬೇಕು.ಇಂದಿನ ಲೇಖಕರಿಗೆ ಓದಿನ ಕೊರತೆ ಇದೆ. ನಿರಂತರ ಓದು ಪ್ರೌಢ ಚಿಂತನೆಗಳನ್ನು ಬೆಳೆಸುತ್ತದೆ, ಅಭಿವ್ಯಕ್ತಿ ಸಾಮರ್ಥ್ಯವನ್ನು ವಿಸ್ತರಿಸುತ್ತದೆ. ಕವಿಯೊಬ್ಬನು ಮತ್ತೊಬ್ಬರ ಕವಿತೆಯನ್ನು ಆಲಿಸುವ ಸೌಜನ್ಯ ರೂಢಿಸಿಕೊಂಡಿಲ್ಲದಿದ್ದರೆ ಸ್ವತಃ ಕವಿತೆ ಕಟ್ಟುವುದು ಕವಿ. ಸಮುದಾಯ ಪ್ರಜ್ಞೆ ಇಲ್ಲದ, ಮಾನವತೆ ಪರವಾದ ತುಡಿತವಿರದ ವ್ಯಕ್ತಿ ಬರೆಯದಿದ್ದರೆ ಏನೂ ನ?ವಿಲ್ಲ ಎಂದರು.
ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡಮಾದಯ್ಯ ಮಾತನಾಡಿ, ಲೇಖಕರ ಸಂಘವು ಸಾಹಿತ್ಯ ಲೋಕದ ಹಿರಿಯರನ್ನು ಗೌರವಿಸುತ್ತಾ, ಪ್ರತಿಭಾವಂತ ಯುವ ಕವಿಗಳನ್ನು ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಜಿಲ್ಲೆಯ ಐವತ್ತು ಕವಿಗಳ ಪದ್ಯಗಳನ್ನು ಒಳಗೊಂಡ ಸಂಕಲನ ಪ್ರಕಟಿಸುತ್ತಿದೆ. ಕವಿತೆಗಳು ಸ್ವಾಭಾವಿಕವಾಗಿರಲಿ, ವೈವಿದ್ಯತೆ ಇರಲಿ, ಎಲ್ಲ ಸಂಕೋಲೆಗಳನ್ನು ದಾಟಿ ಜನಪರವಾಗಿರಲಿ ಎಂದರು.ಬಾಳಗುಣಸೆ ಮಂಜುನಾಥ್, ಮದ್ದೂರು ದೊರೆಸ್ವಾಮಿ, ಕೋಮಲ ಸುರೇಶ್, ಆಸಿಮ, ಶಿವಕುಮಾರ್ ಕೆಂಪನಪುರ, ಕಿರಣ್ ಗಿರ್ಗಿ, ಕೆಸ್ತೂರು ಮಂಜುನಾಥ, ಪ್ರಸಾದ್ ಅರಳೀಪುರ, ರವಿಚಂದ್ರ ಕಹಳೆ, ಕುಸುಮ ಆಲ್ಕೆರೆ, ಭಾಗ್ಯ ಗೌರೀಶ್, ಸುಮಾ ಸಂತೋಷ,ಡಾ ನಿಂಗಪ್ಪ ಮಂಟೇಧರ್, ಸೇರಿದಂತೆ ೨೩ ಕವಿಗಳು ಕವಿತೆ ವಾಚಿಸಿದರು.
ವೇದಿಕೆಯಲ್ಲಿ ಸಾಹಿತಿ ಸೋಮಶೇಖರ ಬಿಸಲ್ವಾಡಿ, ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ ಕೇಶವನ್ ಪ್ರಸಾದ್ , ಮಂಜುಳ ಪಂಜನಹಳ್ಳಿ, ಡಾ ಪಿ ಪ್ರೇಮ ಉಪಸ್ಥಿತರಿದ್ದರು.