ಮನಸ್ಥಿತಿಯ ಪಲ್ಲಟದಿಂದ ಅಪರಾಧಿ ಪ್ರಜ್ಞೆ ಹೆಚ್ಚಳ: ಡಾ.ಶ್ರೀಧರ್‌

| Published : May 20 2024, 01:31 AM IST

ಮನಸ್ಥಿತಿಯ ಪಲ್ಲಟದಿಂದ ಅಪರಾಧಿ ಪ್ರಜ್ಞೆ ಹೆಚ್ಚಳ: ಡಾ.ಶ್ರೀಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಕಾರಾತ್ಮಕ ಪತ್ರಿಕೋದ್ಯಮ ಅಪರೂಪ ಎಂಬಂತಾಗಿದ್ದು, ಮಾಧ್ಯಮಗಳು ಸಮಾಜವನ್ನು ಸಕಾರಾತ್ಮಕಗೊಳಿಸಬೇಕು. ಡಿಜಿಟಲ್ ಪತ್ರಿಕೋದ್ಯಮ ಬಂದ ನಂತರ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಪತ್ರಕರ್ತರು ನಿರಂತರ ಅಧ್ಯಯನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಸುದ್ದಿ ಮಾಧ್ಯಮಗಳಲ್ಲಿ ವಿಜ್ಞಾನ ಲೇಖಕರ ಕೊರತೆ ಇದೆ. ವಿಜ್ಞಾನ ಬರಹಗಾರರನ್ನು ಸೃಷ್ಟಿಸುವ ಕೆಲಸ ಆಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸಮಾಜದಲ್ಲಿ ಅಪರಾಧಿ ಮನೋಭಾವನೆ ಹೆಚ್ಚಾಗುತ್ತಿದ್ದು, ಅಪರಾಧ ಚಟುವಟಿಕೆಗಳು ಸಹ ವೃದ್ಧಿಸಿವೆ. ಇದಕ್ಕೆ ಮನಸ್ಥಿತಿಯಲ್ಲಿ ಆದ ಬದಲಾವಣೆಯೇ ಕಾರಣವೇ, ಅಥವಾ ಬೇರೆ ಕಾರಣಗಳಿವೆಯೇ ಎಂಬ ನಿಗೂಢತೆಯ ಬೆನ್ನತ್ತಿ ಬರೆಯುವ ಮೂಲಕ ಪತ್ರಕರ್ತರು ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದು ಹಿರಿಯ ಮನೋವಿಜ್ಞಾನಿ ಡಾ.ಶ್ರೀಧರ್‌ ಹೇಳಿದರು.

ಇಲ್ಲಿನ ಲಯನ್ಸ್‌ ಡಯಾಲಿಸಿಸ್ ಕೇಂದ್ರದ ಆವರಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವಿಜ್ಞಾನ ಸಿರಿ ಮಾಸಪತ್ರಿಕೆ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರಾದವರು ಎಲ್ಲವನ್ನೂ ಒಪ್ಪಿಕೊಳ್ಳಬಾರದು ಮತ್ತು ಅಪ್ಪಿಕೊಳ್ಳಬಾರದು. ಪ್ರಶ್ನಿಸುವ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಪೂರ್ವಾಗ್ರಹ ಹೊಂದಿರಬಾರದು. ವಿಷಯವನ್ನು ಗ್ರಹಿಸುವ, ವಿಶ್ಲೇಷಿಸುವ, ವಿಮರ್ಶಿಸುವ ಮನಃಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಕಾರಾತ್ಮಕ ಪತ್ರಿಕೋದ್ಯಮ ಅಪರೂಪ:

ಹಿರಿಯ ಪತ್ರಕರ್ತ ವಿ.ನಂಜುಂಡಪ್ಪ ಮಾತನಾಡಿ, ಸಕಾರಾತ್ಮಕ ಪತ್ರಿಕೋದ್ಯಮ ಅಪರೂಪ ಎಂಬಂತಾಗಿದ್ದು, ಮಾಧ್ಯಮಗಳು ಸಮಾಜವನ್ನು ಸಕಾರಾತ್ಮಕಗೊಳಿಸಬೇಕು. ಡಿಜಿಟಲ್ ಪತ್ರಿಕೋದ್ಯಮ ಬಂದ ನಂತರ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಪತ್ರಕರ್ತರು ನಿರಂತರ ಅಧ್ಯಯನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಸುದ್ದಿ ಮಾಧ್ಯಮಗಳಲ್ಲಿ ವಿಜ್ಞಾನ ಲೇಖಕರ ಕೊರತೆ ಇದೆ. ವಿಜ್ಞಾನ ಬರಹಗಾರರನ್ನು ಸೃಷ್ಟಿಸುವ ಕೆಲಸ ಆಗಬೇಕಾಗಿದೆ. ಕೃತಕ ಬುದ್ಧಿಮತ್ತೆ ಕೈಮೀರುತ್ತಿರುವ ಬಗ್ಗೆ ಎಚ್ಚರಿಕೆಯ ಮಾತುಗಳು ಕೇಳಿ ಬರುತ್ತಿವೆ. ಪತ್ರಕರ್ತರು ಸುದ್ದಿಯಲ್ಲಿ ಸಮಸ್ಯೆ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಾರಣ ಮತ್ತು ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ ಎಂದರು.

ಸಾಮಾಜಿಕ ಸ್ವಾಸ್ಥ್ಯ ಕಾಪಾಡಿ:

ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮಾತನಾಡಿ, ಸುದ್ದಿ ಮಾಧ್ಯಮಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಬೇಕು. ವಾಸ್ತವ ಸ್ಥಿತಿಯನ್ನು ಅರಿತು ಸುದ್ದಿಗಳನ್ನು ಮಾಡಬೇಕು. ಜಾಹೀರಾತು ಇಲ್ಲದೇ ಸುದ್ದಿ ಮಾಧ್ಯಮಗಳು ಉಳಿಯಲು ಸಾಧ್ಯವಿಲ್ಲ. ಮಾಧ್ಯಮಗಳು ಮೌಢ್ಯತೆಯ ಬಗ್ಗೆ ಜನರಲ್ಲಿ ಅರಿವು ಉಂಟು ಮಾಡಬೇಕು. ಮೂಢನಂಬಿಕೆಗಳು ಮನುಷ್ಯತ್ವವನ್ನು ನಾಶ ಮಾಡುತ್ತವೆ ಎಂದರು.

ಪತ್ರಿಕೆಗೆ ಹೊಸ ವಿನ್ಯಾಸ:

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ವಿಜ್ಞಾನ ಸಿರಿ ಪತ್ರಿಕೆ ಎಲ್ಲರ ಮನೆ, ಮನಗಳನ್ನು ತಲುಪಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಲಾಗಿದ್ದು, ಪತ್ರಿಕೆಗೆ ಹೊಸ ವಿನ್ಯಾಸದ ಜೊತೆಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಉಪಾಧ್ಯಕ್ಷ ಶ್ರೀರಾಮಚಂದ್ರ, ಕಾರ್ಯದರ್ಶಿ ಚಿಕ್ಕಹನುಮಂತೇಗೌಡ, ಲೆಕ್ಕಪರಿಶೋಧಕ ಕೆ.ಪಿ.ಲಕ್ಷ್ಮೀನಾರಾಯಣ್, ಕಾನೂನು ಸಲಹೆಗಾರ ಬಾಬಾಸಾಹೇಬ್, ಪದವಿ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ರಾಮಕೃಷ್ಣಯ್ಯ, ವಿಜ್ಞಾನ ಸಿರಿ ಮಾಸ ಪತ್ರಿಕೆ ಸಂಪಾದಕ ವಿ.ಟಿ.ಸ್ವಾಮಿ, ಸಂಪಾದಕ ಮಂಡಳಿಯ ಸದಸ್ಯರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ‌