ಹೆಚ್ಚಿದ ಬೀದಿ ನಾಯಿಗಳ ಹಾವಳಿ, ಭಯದಲ್ಲೇ ಓಡಾಡುವ ಸ್ಥಿತಿ

| Published : Oct 09 2023, 12:45 AM IST

ಹೆಚ್ಚಿದ ಬೀದಿ ನಾಯಿಗಳ ಹಾವಳಿ, ಭಯದಲ್ಲೇ ಓಡಾಡುವ ಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಬೀದಿಬದಿ ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

ರವಿ ಮೇಗಳಮನಿ

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಬೀದಿಬದಿ ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

ಪಟ್ಟಣದ ಬಸ್ ನಿಲ್ದಾಣ, ಸಂತೆ ಮೈದಾನ, ಸಿಇಎಸ್ ಸಂಸ್ಥೆ, ಪೇಟೆ ಬಸವೇಶ್ವರ ದೇವಸ್ಥಾನದ ಬಳಿ, ಚೌಡಿ ಸರ್ಕಲ್, ಜಾಲಿಕಟ್ಟೆ, ಮಿನಿ ವಿಧಾನಸೌಧದ ಮುಂಭಾಗ, ಸರ್ವಜ್ಞ ಸರ್ಕಲ್, ಗುರುಭವನ, ವಿದ್ಯಾನಗರ, ಜನತಾ ಪ್ಲಾಟ್, ಹೌಸಿಂಗ್ ಬೋರ್ಡ್, ಸಂತೆ ಮೈದಾನ, ಪಟ್ಟಣ ಪಂಚಾಯಿತಿ ಬಳಿ ಸೇರಿದಂತೆ ಪ್ರಮುಖ ರಸ್ತೆ, ವಿವಿಧ ಕಾಲನಿಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ.

ಗುಂಪು ಗುಂಪಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಇನ್ನು ಹಂದಿಗಳ ಮೇಲಿನ ದಾಳಿಗಳ ಸಂಖ್ಯೆಯಂತೂ ಮೀತಿ ಮೀರುತ್ತಿದೆ. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರ ಮೇಲೂ ನಾಯಿಗಳು ಎರಗಿ ಗಾಯಗೊಳಿಸಿದ ಘಟನೆಗಳು ನಡೆದಿವೆ. ಇನ್ನು ಬೈಕಿಗೆ ನಾಯಿಗಳು ಅಡ್ಡ ಬಂದ ಪರಿಣಾಮ ಅನೇಕ ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಜಾನೆ ಮತ್ತು ರಾತ್ರಿಯ ಸಮಯದಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸವಾರನನ್ನು ಬೀದಿನಾಯಿಗಳಯ ಬೆನ್ನುಹತ್ತಿ ಭಯಭೀತಿಗೊಳಿಸುತ್ತಿವೆ. ಕೆಲವರನ್ನು ಕಚ್ಚಿ ಗಾಯಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ. ಇದರಿಂದ ವಾಹನ ಸವಾರರು ಬೀದಿ ನಾಯಿಗಳ ಹಾವಳಿಯಿಂದ ಆತಂಕಗೊಂಡಿದ್ದಾರೆ.

ಮಕ್ಕಳು ಜೀವಭಯದಿಂದಲೇ ಶಾಲೆಗೆ ಹೋಗಿ ಬರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಹಿಳೆಯರು, ವೃದ್ಧರು ಪಟ್ಟಣದಲ್ಲಿ ರಸ್ತೆಗಿಳಿಯಲು ಯೋಚನೆ ಮಾಡುವಂತಾಗಿದೆ.

ಪಟ್ಟಣದ ರಸ್ತೆಯಲ್ಲಿ ಓಡಾಡುವುದೇ ದೊಡ್ಡ ಸವಾಲಾಗಿದೆ. ಹಲವು ಬಾರಿ ಪಟ್ಟಣ ಪಂಚಾಯಿತಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನತಾ ಪ್ಲಾಟ್ ನಿವಾಸಿಗಳು ಆರೋಪಿಸಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಲು ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ ಕುರಿತು ನನ್ನ ಗಮನಕ್ಕೆ ಈಗಾಗಲೇ ಬಂದಿದ್ದು, ಕಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪಟ್ಟಣದಲ್ಲಿ ನಾಯಿಗಳ ಹಾವಳಿ ನಿಯಂತ್ರಣ ಕ್ರಮಕೈಗೊಳ್ಳಲಾಗುವುದು. ಶೀಘ್ರದಲ್ಲಿ ಬೀದಿ ನಾಯಿಗಳನ್ನು ಹಿಡಿದು ಸ್ಥಳಾತರಿಸಲಾಗುವುದು ಎನ್ನುತ್ತಾರೆ ಪಪಂನ ಸಮುದಾಯ ಸಂಘಟನಾಧಿಕಾರಿ ಸಿ.ಎಂ. ಪುಟ್ಟಕ್ಕಳವರ.