ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ರೈತರು ಕೃಷಿ ಆದಾಯವನ್ನು ಹೆಚ್ಚಿಸಲು ಕುರಿ ಮತ್ತು ಆಡು ಸಾಕಾಣಿಕೆ ಒಳಗೊಂಡ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ತಮ್ಮ ಬೆಳೆಗಳಿಗೆ ಉತ್ತಮ ಸಾವಯವ ಗೊಬ್ಬರ ಪಡೆಯಬಹುದು ಎಂದು ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ತಾಲೂಕಿನ ರಾಹುತನಕಟ್ಟಿ (ನಿಕ್ರಾ ಯೋಜನೆ ಗ್ರಾಮ) ರೈತರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಒಳ ಆವರಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳು ಹಾಗೂ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕುರಿ ಮತ್ತು ಆಡುಗಳಲ್ಲಿ ದೇಹದ ತೂಕವನ್ನು ಹೆಚ್ಚಿಸಿ ಒಳ್ಳೆಯ ಬೆಲೆ ದೊರಕುವುದರಿಂದ ರೈತರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಎಂದರು.
ತರಬೇತಿ ಕಾರ್ಯಕ್ರಮದ ಸಂಘಟಿಕ ಹಾಗೂ ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿ, ಕುರಿ ಮತ್ತು ಆಡುಗಳಿಗೆ ಏಕದಳ ಹಾಗೂ ದ್ವಿದಳ ಹಸಿರು ಮೇವನ್ನು ಶೇ. 75:25 ಪ್ರಮಾಣದಲ್ಲಿ ನೀಡುವುದರಿಂದ ಅವುಗಳ ಆರೋಗ್ಯವನ್ನು ಸುವ್ಯವಸ್ಥಿತ ರೀತಿಯಲ್ಲಿ ಕಾಪಾಡಿಕೊಂಡು ಹೆಚ್ಚಿನ ತೂಕವನ್ನು ಪಡೆಯಬಹುದು. 200-250 ಗ್ರಾಂ (ಪ್ರತಿ ವಯಸ್ಕ ಕುರಿ / ಆಡು) ನಷ್ಟು ದಾಣಿ ಮಿಶ್ರಣವನ್ನು ನೀಡಬೇಕು. ಕುರಿ ಮತ್ತು ಆಡುಗಳಿಗೆ ಬರುವ ವಿವಿಧ ರೋಗಗಳಾದ ಗಂಟಲು ಬೇನೆ, ಕರಳು ಬೇನೆ ಮತ್ತು ಪಿ.ಪಿ.ಆರ್ ರೋಗಗಳ ಚಿಕಿತ್ಸೆ ಮತ್ತು ತಡೆಗಟ್ಟಬಹುದಾದ ಕ್ರಮಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.ಕೇಂದ್ರದ ಹವಾಮಾನ ಶಾಸ್ತçಜ್ಞ ಡಾ. ಶಾಂತವೀರಯ್ಯ ಮಾತನಾಡಿ, ಇವರು ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ಏಕವಾರ್ಷಿಕ ಮತ್ತು ಬಹುವಾರ್ಷಿಕ, ಏಕದಳ ಮತ್ತು ದ್ವಿದಳ ಮೇವಿನ ಬೆಳೆಗಳು ಹಾಗೂ ಬೇಸಾಯ ಕ್ರಮಗಳ ಬಗ್ಗೆ ವಿವರಿಸಿದರು.
ಕುರಿ ಉಣ್ಣೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಹೆಚ್ಚುವರಿ ಆದಾಯಗಳಿಸಬಹುದು ಎಂದು ಕೇಂದ್ರದ ಗೃಹ ವಿಜ್ಞಾನಿ ವಿದ್ಯಾ ಸಂಗಣ್ಣವರ ತಿಳಿಸಿದರು.ಕುರಿ ಮತ್ತು ಆಡು ಸಾಕಾಣಿಕೆಗಾಗಿ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಪಶು ವೈದ್ಯಾಧಿಕಾರಿ ಡಾ. ಪವನ ಬೆಳಕೇರಿ ಮಾಹಿತಿ ನೀಡಿದರು.
ಕಾರ್ಯಕ್ರಮದ ನಂತರ ಭಾಗವಹಿಸಿದ ರೈತರಿಗೆ ಕೇಂದ್ರದ ಕುರಿ ಸಾಕಾಣಿಕೆ ಘಟಕ, ಅಝೋಲಾ ಘಟಕ ಮತ್ತು ಮೇವಿನ ತಾಕುಗಳಿಗೆ ಕರೆದುಕೊಂಡು ಮಾಹಿತಿ ನೀಡಲಾಯಿತು.ಚಂದ್ರಕಾಂತ ಕೊಟಬಾಗಿ, ಡಾ. ಲಕ್ಷ್ಮೀ ಪಾಟೀಲ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 35 ಜನ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.