ಟಿಬಿ ಡ್ಯಾಂಗೆ ಹೆಚ್ಚಿದ ಒಳಹರಿವು, ಭೀತಿ ಶುರು

| Published : Aug 19 2025, 01:00 AM IST

ಟಿಬಿ ಡ್ಯಾಂಗೆ ಹೆಚ್ಚಿದ ಒಳಹರಿವು, ಭೀತಿ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್ ಪೈಕಿ ಮುರಿದು ಹೋಗಿದ್ದ 19ನೇ ಕ್ರಸ್ಟ್‌ಗೇಟ್ (ಸ್ಟಾಪ್‌ಲಾಗ್‌ ಗೇಟ್‌ ಅಳವಡಿಸಲಾಗಿದೆ) ಸೇರಿದಂತೆ 7 ಕ್ರಸ್ಟ್‌ಗೇಟ್ ಬಾಗಿದೆ. ಆಪರೇಟ್ ಮಾಡಲು ಬರುತ್ತಿಲ್ಲ. ಹೀಗಾಗಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 105.855 ಟಿಎಂಸಿ ಇದ್ದರೂ ಅದನ್ನು 80ಕ್ಕೆ ಇಳಿಸಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಒಳಹರಿವು ಹೆಚ್ಚಿದೆ. ಇದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜನರು ಹಾಗೂ ಸರ್ಕಾರಕ್ಕೆ ಭಯ ಶುರುವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಪರಿಸ್ಥಿತಿ ಎದುರಿಸುವುದು ಹೇಗೆ ಎಂಬು ಆತಂಕವೂ ಮನೆಮಾಡಿದೆ.

ಜಲಾಶಯದ 33 ಕ್ರಸ್ಟ್‌ಗೇಟ್ ಪೈಕಿ ಮುರಿದು ಹೋಗಿದ್ದ 19ನೇ ಕ್ರಸ್ಟ್‌ಗೇಟ್ (ಸ್ಟಾಪ್‌ಲಾಗ್‌ ಗೇಟ್‌ ಅಳವಡಿಸಲಾಗಿದೆ) ಸೇರಿದಂತೆ 7 ಕ್ರಸ್ಟ್‌ಗೇಟ್ ಬಾಗಿದೆ. ಆಪರೇಟ್ ಮಾಡಲು ಬರುತ್ತಿಲ್ಲ. ಹೀಗಾಗಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 105.855 ಟಿಎಂಸಿ ಇದ್ದರೂ ಅದನ್ನು 80ಕ್ಕೆ ಇಳಿಸಲಾಗಿದೆ. ಇದೀಗ ಜಲಾಶಯಕ್ಕೆ ಒಳಹರಿವು ಹೆಚ್ಚಿದ ಪರಿಣಾಮ ಜಲಾಶಯದಿಂದ ನದಿಗೆ 22 ಗೇಟ್‌ ಮೂಲಕ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡಲಾಗುತ್ತಿದೆ. ಉಳಿದ 11 ಕ್ರಸ್ಟ್‌ಗೇಟ್ ತೆರೆಯಬೇಕಾಗಿದೆ. ಈ ಪೈಕಿ 7 ಕ್ರಸ್ಟ್‌ಗೇಟ್ ಬಾಗಿದ್ದು, ಕಾರ್ಯನಿರ್ವಹಿಸುವುದು ಕಷ್ಟ. ಹೀಗಾಗಿ ಅಧಿಕಾರಿಗಳಿಗೆ ಆತಂಕ ಎದುರಾಗಿದೆ.

ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್‌ ವರೆಗೆ ನೀರು ಹರಿದು ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಇದಕ್ಕಿಂತ ಹೆಚ್ಚಿನ ಒಳ ಹರಿವು ಬಂದರೆ ಇರುವ 26 ಗೇಟ್‌ ಮೂಲಕ ನದಿಗೆ ನೀರು ಹರಿಸಲು ಕಷ್ಟವಾಗುತ್ತದೆ. ಒಂದು ವೇಳೆ ಬಿಟ್ಟರೆ ಕ್ರಸ್ಟ್‌ಗೇಟ್ ಮೇಲೆ ಒತ್ತಡ ಹೆಚ್ಚಾಗಲಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ.

ಬಹುದೊಡ್ಡ ಆತಂಕ:

ಸದ್ಯಕ್ಕೆ ಜಲಾಶಯದ ಕ್ರಸ್ಟ್‌ಗೇಟ್ ಸರ್ವೇ ಮಾಡಿರುವ ತಜ್ಞರ ಸಮಿತಿ ಪ್ರಕಾರ 33 ಕ್ರಸ್ಟ್‌ಗೇಟ್‌ಗಳ (75 ವರ್ಷ) ಸಾಮರ್ಥ್ಯ ಮುಗಿದಿದ್ದು ಬದಲಾಯಿಸಬೇಕು. ಈಗಾಗಲೇ ಗೇಟ್‌ಗಳು ಶೇ. 40ರಿಂದ 50ರಷ್ಟು ಸವಕಳಿಯಾಗಿವೆ. ಈ ನಡುವೆ ಗೇಟ್ ನಂ. 11, 18, 20, 24, 27, 28 ಬಹುತೇಕ ಬೆಂಡಾಗಿವೆ. ಹೀಗಾಗಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಆತಂಕ ಶುರುವಾಗಿದೆ. ಸರ್ಕಾರವು ಎಚ್ಚೆತ್ತುಕೊಂಡಿದ್ದು ಜಲಾಶಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವಿಶೇಷ ನಿಗಾ ಇರಿಸುವಂತೆ ಸೂಚಿಸಿದೆ.

ಹೆಚ್ಚಿದ ಒಳಹರಿವು:

ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಈಗಾಗಲೇ ಜಲಾಶಯದಿಂದ 1.07 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ ಮಾಡುತ್ತಿರುವುದಾಗಿ ಜಿಲ್ಲಾಡಳಿತವೇ ಪ್ರಕಟಣೆಯಲ್ಲಿ ತಿಳಿಸಿದೆ. ನದಿ ಪಾತ್ರದಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ 3.5 ಲಕ್ಷ ಕ್ಯುಸೆಕ್‌ ಬಿಟ್ಟಿರುವ ಉದಾಹರಣೆ ಇವೆ. 2009ರಲ್ಲಿ ದಾಖಲೆ ಪ್ರಮಾಣದಲ್ಲಿ ಒಳಹರಿವು ಬಂದಿದ್ದರಿಂದ ನದಿಗೆ 3.5 ಲಕ್ಷಕ್ಕೂ ಅಧಿಕ ನೀರು ಬಿಡಲಾಗಿತ್ತು. ಇಂಥ ಒಳಹರಿವು ಈಗ ಬಂದಿದ್ದೆ ಆದರೆ ದೊಡ್ಡ ಆತಂಕವಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಆರೋಪ, ಪ್ರತ್ಯಾರೋಪ:

ಈ ನಡುವೆ 19ನೇ ಕ್ರಸ್ಟ್‌ಗೇಟ್‌ಗೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪ ನಡೆದಿದೆ. ಕಳೆದ ಆಗಸ್ಟ್‌ನಲ್ಲಿ ಮುರಿದಿದ್ದ ಕ್ರಸ್ಟ್‌ಗೇಟ್‌ ದುರಸ್ತಿ ಮಾಡಿಸಲು ಸರ್ಕಾರಕ್ಕೆ ಆಗಿಲ್ಲ ಎಂದು ಬಿಜೆಪಿ ನಾಯಕರು ದೂರಿದರೆ, ವಿಳಂಬಕ್ಕೆ ಕೇಂದ್ರ ಸರ್ಕಾರವೇ ಕಾರಣವೆಂದು ಕಾಂಗ್ರೆಸ್‌ ನಾಯಕರು ದೂರುತ್ತಿದ್ದಾರೆ. ಭದ್ರಾ ಡ್ಯಾಂ ಮತ್ತು ‌ವರದಾ ನದಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಿದ್ದು ತುಂಗಭದ್ರಾ ಜಲಾಶಯದಿಂದ 1.10 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡುವ ಸಂಭವವಿದೆ. ನದಿ ಪಾತ್ರಗಳ ಜನರು ಯಾವುದೇ ಕಾರಣಕ್ಕೆ ನದಿಗೆ ತೆರಳದಂತೆ ಮತ್ತು ತಮ್ಮ ಜಾನುವಾರುಗಳನ್ನು‌ ನದಿಗೆ ಕೊಂಡೊಯ್ಯದಂತೆ ಜನರು ‌ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹೇಳಿದ್ದಾರೆ.