ಬುಗಡನಹಳ್ಳಿಯಲ್ಲಿ ಹೆಚ್ಚಿದ ಚಿರತೆ ದಾಳಿ ಮೇಕೆಗಳ ಬಲಿ

| Published : Mar 07 2025, 12:46 AM IST

ಸಾರಾಂಶ

ತಾಲೂಕಿನ ಕಸಬಾದ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಗಡನಹಳ್ಳಿ ಗ್ರಾಮದ ಆಸುಪಾಸು ಚಿರತೆ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಕಸಬಾದ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಗಡನಹಳ್ಳಿ ಗ್ರಾಮದ ಆಸುಪಾಸು ಚಿರತೆ ಹಾಳಿ ಹೆಚ್ಚಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬುಗಡನಹಳ್ಳಿ ಸಮೀಪ ಸಾಮಾಜಿಕ ಅರಣ್ಯ ಇರುವ ಕಾರಣ ಚಿರತೆಯ ಆವಾಸ ಸ್ಥಾನವಾಗಿದೆ. ಇದರಿಂದ ಈ ಗ್ರಾಮದ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಚಿರತೆಯ ಸಂಚಾರ ಹೆಚ್ಚಿದೆ. ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಗುರುವಾರ ಬುಗಡನಹಳ್ಳಿ ಗ್ರಾಮದ ರೈತ ಭರತ್ ಕುಮಾರ್ ಎಂಬುವವರು ಮೇಕೆಗಳನ್ನು ಮೇಯಿಸುವಾಗ ಹಾಡುಹಗಲೇ ಚಿರತೆ ಹಠಾತ್ ದಾಳಿ ನಡೆಸಿ ಮೇಕೆಯನ್ನು ಕೊಂದಿದೆ. ಇದೇ ರೀತಿ ಗ್ರಾಮದ ಹತ್ತಕ್ಕೂ ಹೆಚ್ಚು ರೈತರ ಮೇಕೆ, ಕುರಿ ಮತ್ತು ನಾಯಿಗಳನ್ನು ಚಿರತೆ ಹಿಡಿದು ತಿಂದಿದೆ.

ಸಾರಿಗೆಹಳ್ಳಿ ಕೆರೆ ಪಕ್ಕದ ಜಾಲಿ ಕಾವಲ್ ಹತ್ತಿರ ನಾಲ್ಕೈದು ಚಿರತೆ ಕಳೆದ ನಾಲ್ಕೈದು ವರ್ಷಗಳಿಂದಲೂ ವಾಸವಾಗಿದೆ. ಗ್ರಾಮಸ್ಥರ ಜಾನುವಾರುಗಳಿಗೆ ತೊಂದರೆ ಕೊಡುತ್ತಾ ಬಂದಿದೆ. ಈ ಬಗ್ಗೆ ಚಿಕ್ಕನಾಯಕನಹಳ್ಳಿಯ ಅರಣ್ಯಾಧಿಕಾರಿಗಳಿಗೆ ಮತ್ತು ತಾಲೂಕಿನ ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಆರೋಪಿಸಿದರು. ಜನರ ಮೇಲೆ ಚಿರತೆ ದಾಳಿ ಮಾಡುವ ಮುನ್ನಾ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಹೊರವಲಯದಲ್ಲಿ ಬೋನಿಟ್ಟು ಚಿರತೆ ಸೆರೆಹಿಡಿಯ ಬೇಕು ಇಲ್ಲವಾದಲ್ಲಿ ಅರಣ್ಯ ಇಲಾಖೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬುಗಡನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.