ಹೆಚ್ಚುತ್ತಿರುವ ಮನೆ ಕಳ್ಳತನ ಪ್ರಕರಣ, ಆತಂಕದಲ್ಲಿ ಜನತೆ

| Published : Mar 02 2025, 01:20 AM IST

ಸಾರಾಂಶ

ಹಾವೇರಿಯಲ್ಲಿ ನಿತ್ಯವೂ ಒಂದಿಲ್ಲೊಂದು ಏರಿಯಾದಲ್ಲಿ ಮನೆಗಳ್ಳತನ ಪ್ರಕರಣ ನಡೆಯುತ್ತಿದೆ. ಯಾವ ನಗರದ ನಿವಾಸಿಗಳಿಗೂ ನೆಮ್ಮದಿ ಇಲ್ಲದಂತಾಗಿದೆ. ಪೊಲೀಸರು ಎಷ್ಟೇ ಬಂದೋಬಸ್ತ್‌, ಗಸ್ತು ಬಿಗಿಗೊಳಿಸಿದರೂ ಕಳ್ಳತನ ಪ್ರಕರಣ ನಿಲ್ಲುತ್ತಿಲ್ಲ.

ನಾರಾಯಣ ಹೆಗಡೆ

ಹಾವೇರಿ: ಜಿಲ್ಲೆಯಲ್ಲಿ ಮನೆ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಹೋಗಲು ಭಯಪಡುವಂತಾಗಿದೆ. ರಾತ್ರಿಯಷ್ಟೇ ಅಲ್ಲದೇ ಹಗಲಿನಲ್ಲೂ ಕಳ್ಳರು ಕೈಚಳಕ ತೋರುತ್ತಿದ್ದು, ಪೊಲೀಸ್‌ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ನಿತ್ಯವೂ ಒಂದಿಲ್ಲೊಂದು ಏರಿಯಾದಲ್ಲಿ ಮನೆಗಳ್ಳತನ ಪ್ರಕರಣ ನಡೆಯುತ್ತಿದೆ. ಭಾರತಿ ನಗರ, ಬಸವೇಶ್ವರ ನಗರ, ವಿದ್ಯಾನಗರ, ವಿನಾಯಕ ನಗರ ಹೀಗೆ ಎಲ್ಲ ಕಡೆ ಕಳ್ಳತನ ನಡೆಯುತ್ತಿದ್ದು, ಯಾವ ನಗರದ ನಿವಾಸಿಗಳಿಗೂ ನೆಮ್ಮದಿ ಇಲ್ಲದಂತಾಗಿದೆ. ಪೊಲೀಸರು ಎಷ್ಟೇ ಬಂದೋಬಸ್ತ್‌, ಗಸ್ತು ಬಿಗಿಗೊಳಿಸಿದರೂ ಕಳ್ಳತನ ಪ್ರಕರಣ ನಿಲ್ಲುತ್ತಿಲ್ಲ. ಪೊಲೀಸರಿಗೇ ಕಳ್ಳರು ಚಳ್ಳೆಹಣ್ಣು ತಿನ್ನಿಸುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ವರ್ಷದಲ್ಲಿ 158 ಮನೆಗಳ್ಳತನ: ಜಿಲ್ಲೆಯಲ್ಲಿ ಬೈಕ್‌ ಕಳ್ಳತನ ಮಾಮೂಲಿಯಂತಾಗಿದೆ. ಮನೆ ಮುಂದೆ, ಮಾರುಕಟ್ಟೆಯಲ್ಲಿ, ಬಸ್‌ ನಿಲ್ದಾಣ, ಅಂಗಡಿ ಎದುರು ನಿಲ್ಲಿಸಿಟ್ಟಿರುವ ವಾಹನಗಳು ವಾರಸುದಾರರು ತಿರುಗಿ ಬರುವುದರೊಳಗಾಗಿ ಮಾಯವಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಹಸು, ಕುರಿ, ಬೆಲೆಬಾಳುವ ಎತ್ತುಗಳನ್ನು ರಾತ್ರೋರಾತ್ರಿ ವಾಹನದಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಪ್ರಕರಣ ನಿತ್ಯವೂ ವರದಿಯಾಗುತ್ತಿದೆ. ಆದರೆ, ಕಳೆದ ಕೆಲವು ತಿಂಗಳಿಂದ ಮನೆಗಳ್ಳತನ ಹೆಚ್ಚುತ್ತಿರುವುದು ಜನರನ್ನು ಆತಂಕಕ್ಕೆ ನೂಕಿದೆ.

2024ರ ಜನವರಿಯಿಂದ ಡಿಸೆಂಬರ್‌ ವರೆಗೆ 158 ಮನೆಗಳ್ಳತನ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ. ಈ ಪೈಕಿ 129 ರಾತ್ರಿ ಕಳ್ಳತನ ಪ್ರಕರಣವಾಗಿದ್ದರೆ, 29 ಹಗಲು ಕಳ್ಳತನ ವರದಿಯಾಗಿದೆ. ಇವುಗಳಲ್ಲಿ ಇದುವರೆಗೆ ಪೊಲೀಸರು ಪತ್ತೆಹಚ್ಚಿದ್ದು ಕೇವಲ 31 ಕೇಸ್‌ ಮಾತ್ರ.

ಕೀಲಿ ಹಾಕಿದ ಮನೆಗಳೇ ಟಾರ್ಗೆಟ್‌: ಮನೆ ಬಾಗಿಲಿಗೆ ಕೀಲಿ ಹಾಕಿ, ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಡಿತಪಡಿಸಿಕೊಂಡೇ ಕಳ್ಳರು ನಗ, ನಗದು ದೋಚುತ್ತಿರುವುದು ಬಹುತೇಕ ಪ್ರಕರಣಗಳಲ್ಲಿ ನಡೆದಿದೆ. ಇಂಟರ್‌ಲಾಕ್‌ ತೆಗೆದು, ಕಪಾಟಿನ ಬೀಗ ಮುರಿದು ಅದರಲ್ಲಿರುವ ಚಿನ್ನಾಭರಣ, ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಾರೆ. ಹೀಗೆ ಕಳ್ಳತನಕ್ಕೆ ಬಂದಿರುವ ಆರೋಪಿಗಳ ಚಲನವಲನದ ಬಗ್ಗೆ ಹಲವು ಕಡೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೈಯಲ್ಲಿ ಚಾಕು, ಬಡಿಗೆ, ಕಲ್ಲು ಹಿಡಿದು ನಾಲ್ಕಾರು ಜನ ಕಳ್ಳರ ತಂಡವೇ ಬಂಕಾಪುರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಇಳಿದಿರುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ವಿಡಿಯೋ ವೈರಲ್‌ ಆಗಿದೆ. ಆದ್ದರಿಂದ ಒಂದೆರಡು ದಿನ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿ ಬರಲು ಕೂಡ ಜಿಲ್ಲೆಯ ಜನತೆ ಭಯಪಡುವಂತಾಗಿದೆ. ಅದಕ್ಕಾಗಿ ಅನೇಕರು ಸಂಬಂಧಿಕರ ಮನೆಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಅನೇಕ ಬಡ, ಮಧ್ಯಮ ವರ್ಗದ ಕುಟುಂಬಗಳು ಕಣ್ಣೀರು ಹಾಕುತ್ತಿವೆ.

ವಾಕಿಂಗ್‌ ಹೋಗುವ ಮಹಿಳೆಯರ ಸರಗಳ್ಳತನವೂ ನಡೆದಿದೆ. ಪೊಲೀಸರು ಎಷ್ಟೇ ಗಸ್ತು ತಿರುಗುತ್ತಿದ್ದರೂ ಕಳ್ಳತನ ಪ್ರಕರಣ ಕಡಿಮೆಯಾಗುತ್ತಿಲ್ಲ.

ಕಳೆದ ವರ್ಷ ಜಿಲ್ಲೆಯಲ್ಲಿ 258 ಬೈಕ್‌ ಕಳ್ಳತನ ಪ್ರಕರಣ ದಾಖಲಾಗಿದ್ದರೆ, ಇದುವರೆಗೆ ಸಿಕ್ಕಿರುವುದು 51 ಮಾತ್ರ. ಜಿಲ್ಲೆಯಲ್ಲಿ ಬೈಕ್‌ ಕದ್ದು ಅಕ್ಕಪಕ್ಕದ ಜಿಲ್ಲೆಗಳಿಗೆ ಸಾಗಿಸುವ ಕಳ್ಳರು ಸಿಕ್ಕಷ್ಟು ರೇಟಿಗೆ ಮಾರಾಟ ಮಾಡಿ ದಿಢೀರ್ ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಮನೆ ಮುಂದೆ ನಿಲ್ಲಿಸಿಟ್ಟ ಬೈಕ್‌ ಬೆಳೆಗಾಗುವುದರೊಳಗೆ ಮಾಯವಾಗುತ್ತಿವೆ. ಪೊಲೀಸರ ಕಾರ್ಯಾಚರಣೆಯಿಂದ ಬೈಕ್‌ ಕಳ್ಳರು ಆಗಾಗ ಸಿಕ್ಕಿಬೀಳುತ್ತಿದ್ದಾರೆ. ಆದರೆ, ಮನೆಗಳ್ಳರು ಮಾತ್ರ ಸಿಗದೇ ಇರುವುದು ಪೊಲೀಸರ ಕಾರ್ಯವೈಖರಿ ಬಗ್ಗೆಯೇ ಅನುಮಾನ ಪಡುವಂತಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ, ಅಂಗಡಿಗಳ ಮುಂದೆ ಸಿಸಿ ಕ್ಯಾಮೆರಾಗಳು ಇದ್ದರೂ ಕಳ್ಳರು ಸಿಕ್ಕಿಬೀಳದಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಮನೆಗಳ್ಳತನ ಪ್ರಕರಣದಿಂದ ಕಂಗಾಲಾಗಿರುವ ನಗರದ ಜನತೆ, ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ನಿರಂತರವಾಗಿ ಕಳ್ಳತನವಾಗುತ್ತಿರುವ ಬಗ್ಗೆ ಆತಂಕ ತೋಡಿಕೊಂಡಿದ್ದಾರೆ. ಅನೇಕ ಕ್ಲಿಷ್ಟಕರ ಕೇಸ್‌ಗಳನ್ನು ಭೇದಿಸಿ ಸಾಮರ್ಥ್ಯ ತೋರಿರುವ ಜಿಲ್ಲೆಯ ಪೊಲೀಸರು, ಕಳ್ಳರ ಹೆಡೆಮುರಿ ಕಟ್ಟಲು ವಿಶೇಷ ಕಾರ್ಯಾಚರಣೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಅಪರಾಧಿಗಳ ಮೇಲೆ ನಿಗಾ: ಕಳ್ಳತನ ಪ್ರಕರಣ ಭೇದಿಸಲು ಜಿಲ್ಲೆಯಲ್ಲಿ ರಾತ್ರಿ ಬೀಟ್‌ ಬಿಗಿಗೊಳಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ 24x7 ಚೆಕ್‌ಪೋಸ್ಟ್‌ ಮತ್ತು ನಾಕಾಬಂಧಿ ಹಾಕಲಾಗಿದೆ. ಕೆಲವು ಸಂದರ್ಭಗಳಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ಜಾಗರೂಕತೆಯಿಂದ ಕಳ್ಳತನ ತಡೆಯಲಾಗಿದೆ. ನೆರೆಯ ಜಿಲ್ಲೆಗಳ ಅಪರಾಧಿಗಳ ಮೇಲೆ ನಿಗಾ ವಹಿಸಲಾಗಿದೆ. ದೀರ್ಘಕಾಲದ ವರೆಗೆ ಮನೆ ಬಿಟ್ಟು ಹೋಗುತ್ತಿರುವವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೆ ಕಳ್ಳತನ ತಪ್ಪಿಸಬಹುದಾಗಿದೆ ಎಂದು ಹಾವೇರಿ ಎಸ್ಪಿ ಅಂಶುಕುಮಾರ್‌ ಹೇಳಿದರು.