ಸಾಂಸ್ಕೃತಿಕ, ರಂಗಕಲೆಗಳಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳ

| Published : May 27 2024, 01:09 AM IST

ಸಾರಾಂಶ

ಪಠ್ಯೇತರ ಚಟುವಟಿಕೆ, ಸಾಂಸ್ಕ್ರತಿಕ ಹಾಗೂ ರಂಗಕಲೆಗಳಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳ ಜತೆಗೆ ಸರ್ವತೋಮುಖ ಬೆಳೆವಣಿಗೆ ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ನಾಗರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಠ್ಯೇತರ ಚಟುವಟಿಕೆ, ಸಾಂಸ್ಕ್ರತಿಕ ಹಾಗೂ ರಂಗಕಲೆಗಳಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳ ಜತೆಗೆ ಸರ್ವತೋಮುಖ ಬೆಳೆವಣಿಗೆ ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ನಾಗರಾಜು ಹೇಳಿದರು.

ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ರಂಗ ಶಿಬಿರದಲ್ಲಿ ಮಕ್ಕಳಿಂದ ಮೂಡಿಬಂದ ನಾಟಕ ಪ್ರದರ್ಶನ ವೀಕ್ಷಿಸಿ ಮಾತನಾಡಿದರು.

ಮಕ್ಕಳನ್ನು ಪಠ್ಯೇತರ ವಿಷಯ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸಿದರೆ ಕಲಿಕೆಗೆ ತೊಂದರೆಯಾಗುತ್ತದೆ ಎನ್ನುವ ತಂದೆ ತಾಯಿಗಳ ಭಾವನೆ ದೂರ ಮಾಡಬೇಕು. ರಂಗ ಕಲೆ ಮಕ್ಕಳ ಜ್ಞಾಪಕ ಶಕ್ತಿ ಏಕಾಗ್ರತೆ ಮತ್ತು ಆಸಕ್ತಿಗಳನ್ನ ಹೆಚ್ಚಿಸುವ ಕೆಲಸ ಮಾಡುತ್ತವೆ ಎಂದರು.

ರಂಗ ಕಲೆ ಅದ್ಭುತ ಅಭೂತ ಪೂರ್ವವಾದ ಕಲೆ. ಇದರಿಂದ ಮಕ್ಕಳ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಇಂತಹ ಮಕ್ಕಳ ಕಲಿಕೆಯನ್ನು ನೋಡಿದಾಗ ಕಲಿಕೆಯಲ್ಲೂ ಕೂಡ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುವುದನ್ನು ನಾವು ಕಂಡಿದ್ದೇವೆ ಎಂದರು.

ಪೋಷಕರು ಮಕ್ಕಳ ಮಾನಸಿಕ ಮಟ್ಟ ವಿಕಾಸಗೊಳ್ಳಲು ಇಂತಹ ಶಿಬಿರಗಳಿಗೆ ಹೆಚ್ಚು ಹೆಚ್ಚು ತಗ್ಗಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು. ಇದರ ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ಮೂಡಲಪ್ಪ ಯಕ್ಷಗಾನ ಎನ್ನುವ ಕಲೆ ನಶಿಸಿ ಹೋಗುತ್ತಿರುವ ವೇಳೆ ಮಂಡ್ಯ ಜಿಲ್ಲೆಯ ಕರ್ನಾಟಕ ಸಂಘ ಮೂಡಲಪ್ಪಾಯ ಯಕ್ಷಗಾನದ ಕಲಾವಿದರನ್ನು ಕರೆಸಿ ಶಾಲಾ ಮಕ್ಕಳಲ್ಲಿ ಕಲಿಸುವಂತಹ ಒಂದು ಪ್ರಯತ್ನವನ್ನು ಕರ್ನಾಟಕ ಸಂಘ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೊಡ್ಡ ಬ್ಯಾಡರಹಳ್ಳಿ ಸರಕಾರಿ ಶಾಲೆ ಶಿಕ್ಷಕರು ಮಕ್ಕಳಿಗೆ ಎರಡು ತಿಂಗಳ ರಂಗ ತರಬೇತಿ ಶಿಬಿರ ನಡೆಸಿ ಸಾಂಸ್ಕೃತಿಕವಾಗಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಮಕ್ಕಳಿಗೆ ದೇಶದ ಇತಿಹಾಸ ಕಥೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಅರ್ಥ ಮಾಡಿಸುವ ಎನ್ನುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದಾರೆ ಎಂದರು.

ತರಬೇತಿಯಲ್ಲಿ ಮಕ್ಕಳ ರಂಗ ಕರ್ಮಿಗಳಾದ ಮಂಜುನಾಥ ಬಡಿಗೇರ, ತಲಕಾಡಿನ ರವೀಂದ್ರ ಹಾಗೂ ಶಾಲೆಯ ಶಿಕ್ಷಕರ ಪರಿಶ್ರಮದಿಂದ ಅತ್ಯುತ್ತಮವಾದಂತಹ ನಾಟಕ ಸಿದ್ಧವಾಗಿದೆ. ಅದರಲ್ಲೂ ಕರ್ಣ ಅರ್ಜುನರ ಕಾಳಗ ಮಕ್ಕಳ ಅಭಿನಯವನ್ನು ನೋಡಿದರೆ ಭಾವನಾತ್ಮಕವಾಗಿ ನನಗೆ ಕಣ್ಣೀರು ಬಂತು. ಈ ಪ್ರದರ್ಶನ ರಾಜ್ಯದ ಮೂಲೆ ಮೂಲೆಯಲ್ಲೂ ಪ್ರದರ್ಶನವಾಗುವುದರ ಜೊತೆಗೆ ಮೂಡಲಪಾಯ ಯಕ್ಷಗಾನ ನಾಟಕದ ಪರಂಪರೆ ಉಳಿಯುವಂತಾಗಬೇಕು. ಮಕ್ಕಳ ಶಕ್ತಿ ಏನು ಎಂಬುದನ್ನು ನೋಡುಗರಿಗೆ ನಾಟಕದಿಂದ ತೋರ್ಪಡಿಸಬೇಕು ಎಂದರು.

ಶಿಕ್ಷಣಾಧಿಕಾರಿ ಬಿ. ಚಂದ್ರಶೇಖರ್ ಮಾತನಾಡಿ, ಮಕ್ಕಳು ಯಾವುದೇ ವಿಷಯವಾಗಿ ಮಾತನಾಡುವಂತಹ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಹೊರ ತರುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ ರಾಗಿಮುದ್ದನಹಳ್ಳಿ, ಶಿಕ್ಷಣ ಚಿಂತಕರಾದ ಉಮಾ ಕ್ಯಾತಿಯಿನಿ, ಶ್ರೀರಾಮನಾಥ್, ಮಂಡ್ಯ ಸ್ಕೌಟ್ ಅಂಡ್ ಗೈಡ್ಸ್ ಅಧಿಕಾರಿಗಳಾದ ಅನಿಲ್ ಕುಮಾರ್, ಭಕ್ತ ವತ್ಸಲಂ, ರಘು, ರಂಗಭೂಮಿ ನಿರ್ದೇಶಕರಾದ ಮಂಜುನಾಥ ಬಡಿಗೇರ, ತಲಕಾಡು ರವೀಂದ್ರ ಕೃಷ್ಣ, ಚೈತನ್ಯ, ಪ.ಮ. ನಂಜುಂಡಸ್ವಾಮಿ, ಸಂಪನ್ಮೂಲ ವ್ಯಕ್ತಿ ರಾಜೇಗೌಡ, ಉಪನ್ಯಾಸಕ ಧನಂಜಯ ಬ್ಯಾಡರಹಳ್ಳಿ , ಕರ್ನಾಟಕದ ಸಂಘದ ಸೋಮಣ್ಣ, ಗುರುಮೂರ್ತಿ, ಅರ್ಪಿತ, ಎಸ್‌ಡಿಎಂಸಿ ಅಧ್ಯಕ್ಷ ಲಾವಣ್ಯ, ಸದಸ್ಯರಾದ ಲಿಂಗರಾಜು ಕೃಷ್ಣ,ಕುಮಾರ್ ಇತರರು ಭಾಗವಹಿಸಿದ್ದರು.