ಕ್ರೀಡಾ ಮನೋಭಾವ ಬದುಕಿನುದ್ದಕ್ಕೂ ಅಳವಡಿಸಿ: ಎಚ್. ಸೂಫಿ ಹಾಜಿ

| Published : Jan 21 2024, 01:37 AM IST

ಕ್ರೀಡಾ ಮನೋಭಾವ ಬದುಕಿನುದ್ದಕ್ಕೂ ಅಳವಡಿಸಿ: ಎಚ್. ಸೂಫಿ ಹಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕೆ.ಡಿ.ಎಂ.ಎಸ್.ಸಿ.ಎ. ಪದಾಧಿಕಾರಿಗಳನ್ನೊಳಗೊಂಡ ಆಯೋಜನಾ ಸಮಿತಿಯ ಸ್ನೇಹಿತರ ತಂಡ ಮತ್ತು ಮೂರ್ನಾಡಿನ ಗೌತಮ್ ಫ್ರೆಂಡ್ಸ್ ತಂಡಗಳ ನಡುವೆ ನಡೆದ ಸ್ನೇಹ ಸೌಹಾರ್ದ ಪಂದ್ಯದಲ್ಲಿ ಗೌತಮ್ ಫ್ರೆಂಡ್ಸ್ ತಂಡ ಎದುರಾಳಿ ತಂಡವನ್ನು ನೇರ ಎರಡು ಸೆಟ್‌ಗಳಿಂದ ಮಣಿಸಿ ವಿಜಯ ಸಾಧಿಸಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಆಯೋಜನೆಗೊಂಡಿರುವ 15ನೇ ವರ್ಷದ ಜಿಲ್ಲಾಮಟ್ಟದ ಜಮಾಅತ್‌ವಾರು ಹೊನಲು ಬೆಳಕಿನ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಗೆ ಶುಕ್ರವಾರ ಸಂಜೆ ಚಾಲನೆ ದೊರೆಯಿತು.

ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹಿಮಾನ್ ಮತ್ತು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಉದ್ಘಾಟಿಸಿದರು.ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದುದ್ದಿಯಂಡ ಎಚ್. ಸೂಫಿ ಹಾಜಿ ಮಾತನಾಡಿ, ಯಾವುದೇ ಕ್ರೀಡೆಯು ಮನುಷ್ಯರಲ್ಲಿ ಐಕ್ಯತೆ ಮತ್ತು ಸಾಮರಸ್ಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾ ಮನೋಭಾವ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಬಾರದು. ಇಡೀ ಬದುಕಿನದ್ದಕ್ಕೂ ಇದನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ವಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಳೆದ 14 ವರ್ಷಗಳಿಂದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಶ್ರಮಿಸುತ್ತಿರುವ ಸಂಘಟಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮೂರು ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಶುಭ ಕೋರಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಂ.ಎಚ್. ಅಬ್ದುಲ್ ರಹಿಮಾನ್, ಉತ್ತಮ ಕ್ರೀಡಾ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವುದೇ ಕ್ರೀಡಾಕೂಟಗಳ ಆಯೋಜನೆಯ ಮುಖ್ಯ ಆಶಯವಾಗಬೇಕು. ಕ್ರೀಡೆಯಲ್ಲಿ ಪ್ರಮುಖವಾಗಿ ಕಲಿಯಬೇಕಾಗಿದ್ದು ಮತ್ತು ಕಲಿಸಬೇಕಾಗಿದ್ದು ಶಿಸ್ತನ್ನು ಮಾತ್ರ. ಶಿಸ್ತನ್ನು ಮೈಗೂಡಿಸಿಕೊಂಡರೆ ಸಂಯಮ ಸಹಜವಾಗಿಯೇ ರೂಢಿಯಾಗುತ್ತದೆ. ಇವೆರಡನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಯಾವುದೇ ಕ್ರೀಡಾಕೂಟಗಳು ಯಶಸ್ವಿ ಸಾಧಿಸುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಇದರಿಂದ ಮುಂದಿನ ಪೀಳಿಗೆಗೂ ಬಹುದೊಡ್ಡ ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಮುನ್ನ ಸಮುದಾಯದ ಹಿರಿಯ ಮುಖಂಡರಾದ ಆಲೀರ ಎ. ಎರ್ಮು ಹಾಜಿ, ಮೈದಾನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಪಂದ್ಯಾವಳಿಗೆ ಶುಭ ಹಾರೈಸಿದರು. ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ. ಹನೀಫ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲೆಯ ಹೆಸರಾಂತ ವಾಲಿಬಾಲ್ ಪಟು ಬಲಚಂಡ ಗೌತಮ್, ಕಾಂಗ್ರೆಸ್ ಪ್ರಮುಖರಾದ ಜಾನ್ಸನ್, ರಜಾಕ್, ಕೆ. ಎಂ. ಸಯ್ಯದ್ ಬಾವ, ಮೊಹಮ್ಮದ್, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಸಿ.ಯು.ಸಾದುಲಿ, ಪಂದ್ಯಾವಳಿಯ ತೀರ್ಪುಗಾರರ ತಂಡದ ಮುಖ್ಯಸ್ಥರಾದ ಸುರೇಶ್, ಕೆ.ಡಿ.ಎಂ.ಎಸ್.ಸಿ.ಎ. ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್, ಉಪಾಧ್ಯಕ್ಷ ಕರೀಂ ಕಡಂಗ, ಪ್ರಮುಖ ಪದಾಧಿಕಾರಿಗಳಾದ ಮನ್ಸೂರ್ ಅಲಿ, ಕೋಳುಮಂಡ ರಫೀಕ್, ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್, ಸುಬೇರ್ ಕಡಂಗ ಮೊದಲಾದವರು ಉಪಸ್ಥಿತರಿದ್ದರು.ಕೆ.ಡಿ.ಎಂ.ಎಸ್.ಸಿ.ಎ. ಪ್ರಮುಖರಾದ ಅಬ್ದುಲ್ ರೆಹಮಾನ್ (ಅಂದಾಯಿ) ಸ್ವಾಗತಿಸಿದರು. ಆಸಿಫ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಎಂ.ಇಸ್ಮಾಯಿಲ್ ವಂದಿಸಿದರು.ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕೆ.ಡಿ.ಎಂ.ಎಸ್.ಸಿ.ಎ. ಪದಾಧಿಕಾರಿಗಳನ್ನೊಳಗೊಂಡ ಆಯೋಜನಾ ಸಮಿತಿಯ ಸ್ನೇಹಿತರ ತಂಡ ಮತ್ತು ಮೂರ್ನಾಡಿನ ಗೌತಮ್ ಫ್ರೆಂಡ್ಸ್ ತಂಡಗಳ ನಡುವೆ ನಡೆದ ಸ್ನೇಹ ಸೌಹಾರ್ದ ಪಂದ್ಯದಲ್ಲಿ ಗೌತಮ್ ಫ್ರೆಂಡ್ಸ್ ತಂಡ ಎದುರಾಳಿ ತಂಡವನ್ನು ನೇರ ಎರಡು ಸೆಟ್‌ಗಳಿಂದ ಮಣಿಸಿ ವಿಜಯ ಸಾಧಿಸಿತು.