ಮಗು ಪ್ರೀತಿ, ಕಾಳಜಿ ಮತ್ತು ಸಮಯ ದೊಂದಿಗೆ ಬೆಳೆಯುವಂತೆ, ಗಿಡವೂ ಅದೇ ರೀತಿ ಬೆಳೆಯುತ್ತದೆ. ಈ ಗಿಡ ಮಕ್ಕಳ ಶಾಲಾ ಜೀವನದ ಚಿರ ನೆನಪುಗಳಾಗಿ ಉಳಿಯುತ್ತವೆ

ಕೊಪ್ಪಳ: ನಾವು ಮರೆತಿರುವ ಸಹಪಂಕ್ತಿ, ಸಹಭೋಜನದ ಸವಿಗಳು ಸಹಕಾರ ಮತ್ತು ಸಮಾನತೆಯ ಮೌಲ್ಯ ಮಕ್ಕಳಿಗೆ ಅನುಭವದ ಮೂಲಕ ಕಲಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮ ಮಕ್ಕಳಲ್ಲಿ ಐಕ್ಯತೆ ಮತ್ತು ಮಾನವೀಯತೆ ಬೆಳೆಸುತ್ತವೆ ಎಂದು ಶ್ರೀಶಾರದಾ ಇಂಟರ್‌ನ್ಯಾಶನಲ್‌ ಶಾಲೆಯ ಪ್ರಾಂಶುಪಾಲರಾದ ಡಾ. ಕಾಂಚನಾ ಹೇಳಿದರು.

ತಾಲೂಕಿನ ಕಿಡದಾಳ ಗ್ರಾಮದಲ್ಲಿರುವ ಶ್ರೀಶಾರದಾ ಇಂಟರ್‌ ನ್ಯಾಶನಲ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮನೆ ಬುತ್ತಿ -ಗೋ ಗ್ರೀನ್‌ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಗುವಿನ ಹೆಸರಿನಲ್ಲಿ ಒಂದು ಚಿರ ನೆನಪು –ನನ್ನ ಶಾಲೆ, ನನ್ನ ಗಿಡ, ನನ್ನ ನೆನಪು ಎಂಬ ವಿಶೇಷ ಪರಿಸರಪರ ಕಾರ್ಯಕ್ರಮ ಪರಿಚಯಿಸಿದರು. ಮಗು ಪ್ರೀತಿ, ಕಾಳಜಿ ಮತ್ತು ಸಮಯದೊಂದಿಗೆ ಬೆಳೆಯುವಂತೆ, ಗಿಡವೂ ಅದೇ ರೀತಿ ಬೆಳೆಯುತ್ತದೆ. ಈ ಗಿಡ ಮಕ್ಕಳ ಶಾಲಾ ಜೀವನದ ಚಿರ ನೆನಪುಗಳಾಗಿ ಉಳಿಯುತ್ತವೆ ಎಂದು ಕಾರ್ಯಕ್ರಮದ ಮಹತ್ವ ವಿವರಿಸಿದರು. ಕಾರ್ಯಕ್ರಮದ ಭಾಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ವಿವಿಧ ಆರೋಗ್ಯಕರ ಸಸ್ಯ ಶಾಲೆಗೆ ಸಮರ್ಪಿಸಿದರು. ಪೋಷಕರು ತಮ್ಮ ಕೈಯಿಂದ ಮಕ್ಕಳಿಗೆ ಮನೆ ಬುತ್ತಿಯ ಕೈ ತುತ್ತು ನೀಡುವ ಮೂಲಕ ಸಹಭೋಜನದ ಸಂಭ್ರಮ ಅನುಭವಿಸಿದರು. ಇದರ ಜತೆಗೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶ್ರೀಶಾರದಾ ಸಂಸ್ಥೆಯ ನಿರ್ದೇಶಕ ಕಿರಣ್ ಕುಮಾರ್ ವಿ.ಪಾಟೀಲ್, ಟ್ರಸ್ಟಿಗಳಾದ ನೀಲಾಂಬಿಕಾ ಪಾಟೀಲ್, ಪೂಜಾ ವಿ. ಪಾಟೀಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಕೇವಲ ಔಪಚಾರಿಕತೆಯಲ್ಲ, ಹಣಕಾಸಿನ ವಿಷಯವೂ ಅಲ್ಲ. ಇದು ಮಕ್ಕಳ ಜೀವನ ಮೌಲ್ಯ ಹಾಗೂ ಶಾಲೆಯೊಂದಿಗಿನ ಅವಿನಾಭಾವ ಸಂಬಂಧ ಬಲಪಡಿಸುವ ಚಿರ ನೆನಪು ಎಂಬ ಸಂದೇಶ ಸಾರಿತು. ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ಪೋಷಕರು ಹಾಗೂ ಶಾಲಾ ನಿರ್ವಹಣಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.