ಕಳೆದ ಮೂರು ದಶಕಗಳಿಂದ ಅತಿಥಿ ಉಪನ್ಯಾಸಕರು ಶಿಕ್ಷಣ ವಲಯದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ ಅವರ ಸೇವೆಗೆ ಶಾಶ್ವತ ಪರಿಹಾರ ಕೊಡಲು ಯಾವುದೇ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಹೇಳಿದರು.
ಗದಗ: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ ನ. 25ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕಳೆದ ಮೂರು ದಶಕಗಳಿಂದ ಅತಿಥಿ ಉಪನ್ಯಾಸಕರು ಶಿಕ್ಷಣ ವಲಯದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ ಅವರ ಸೇವೆಗೆ ಶಾಶ್ವತ ಪರಿಹಾರ ಕೊಡಲು ಯಾವುದೇ ಸರ್ಕಾರ ಮನಸ್ಸು ಮಾಡುತ್ತಿಲ್ಲ. ರಾಜ್ಯದ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಅತಿಥಿ ಉಪನ್ಯಾಸಕರ ನಿಸ್ವಾರ್ಥ ಸೇವೆಯಿಂದಲೇ ಸಾಗುತ್ತಿದೆ. ಆದರೂ ಸರ್ಕಾರ ಇನ್ನೂ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ ಎಂದರು.
ನ್ಯಾಯಾಲಯದ ಆದೇಶದ ನೆಪವೊಡ್ಡಿ ಯುಜಿಸಿ ನಿಯಮಗಳ ಪ್ರಕಾರ ಎನ್ಇಟಿ, ಎಸ್.ಎಲ್.ಇ, ಪಿಎಚ್‌ಡಿ ಪಡೆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನ ನಡೆಸಲು ತೀರ್ಮಾನಿಸಲಾಗಿದೆ. 20 ವರ್ಷಗಳಿಂದ ಈಗಾಗಲೇ ಸೇವೆ ಸಲ್ಲಿಸಿದ, ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಹೊರಗುಳಿದ ಅತಿಥಿ ಉಪನ್ಯಾಸಕರಿಗೂ ಅವಕಾಶ ಕಲ್ಪಿಸಬೇಕು. ಅನುಭವಿ ಉಪನ್ಯಾಸಕರನ್ನು ಶಕ್ತಿ ಇರುವ ತನಕ ದುಡಿಸಿಕೊಂಡು ಈಗ ಬೀದಿಗೆ ಬಿಡುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.ಕುಟುಂಬ ಸಮೇತ ಪ್ರತಿಭಟನೆ ಹಾಗೂ ದಯಾಮರಣ ಕೋರಿ ಹೋರಾಟಕ್ಕೆ ಇಳಿಯಲಿದ್ದೇವೆ. ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಅತಿಥಿ ಶಿಕ್ಷಕರನ್ನು ಮಾನವೀಯತೆಯಿಂದ ಖಾಯಂಗೊಳಿಸಿ ಎಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು. ಈಗ ಸಿದ್ದರಾಮಯ್ಯನವರು ಸಿಎಂ ಸ್ಥಾನದಲ್ಲಿದ್ದಾರೆ. ಆದರೆ, ಅವರು ತಮ್ಮ ಹೇಳಿಕೆಯನ್ನು ಮರೆತಿದ್ದಾರೆ ಎಂದು ಸಿಎಂ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣು ಮರೆಗುದ್ದಿ, ಸತೀಶ್ ಸರ್ವಿ, ಯಲ್ಲಪ್ಪ ಹಂಚಿನಾಳ, ವಿಜಯಕುಮಾರ ದೇಸಾಯಿಗೌಡ್ರ, ಗೀತಾ ಮೇಟಿ, ಜ್ಯೋತಿ ಬದ್ದಿನ, ಶಾಂತಗೌಡ ಬರಗೂರ, ಎಸ್.ಬಿ. ಜಗಾಪೂರ, ಅಶೋಕ ಬಂಕಾಪೂರ, ಶಶಿ ಬಲೂಚಿ, ವಿರೂಪಾಕ್ಷಿ ಮುಳಗುಂದ, ಪದ್ಮಾ ತಳಗಲ್, ಶಿಲ್ಪಾ ಹಿರೇಮಠ, ಶ್ರೀದೇವಿ ಗದಗಿನ, ನೂರಜಾನ್ ಕದಾಂಪೂರ, ಭಗತಸಿಂಗ್ ನವಲೂರಕರ್, ಶರಣಬಸಪ್ಪ ಮಡಿವಾಳರ, ಶಿವಾನಂದ ಜಟ್ಟೆಣ್ಣನವರ, ಎಂ.ಎಲ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.ಎಚ್ಕೆ ಕಚೇರಿ ಎದುರು..ಗದಗ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಅತಿಥಿ ಉಪನ್ಯಾಸಕರು ಶಾಂತಯುತವಾಗಿ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದೇವೆ. ಆದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಗೆ ಅವಕಾಶ ಸಿಗದಿದ್ದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಕಚೇರಿ ಎದುರು ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ.