ಈ ಹಿಂದೆ ಸಚಿವನಾಗಿ, ಶಾಸಕನಾಗಿ ಅಧಿಕಾರ ಅನುಭವಿಸಿರುವ ಚಲುವರಾಯಸ್ವಾಮಿಗೆ ಜನರು ಅಧಿಕಾರ ಕೊಟ್ಟಿದ್ದ ಸಂದರ್ಭದಲ್ಲಿ ಯಾಕೆ ರೈತರಿಗೆ ಜಮೀನು ಮಂಜೂರು ಮಾಡಲಿಲ್ಲ. ಈಗ ನಾನು ಮಂಜೂರು ಮಾಡಿದ್ದಕ್ಕೆ ಹೊಟ್ಟೆ ಕಿಚ್ಚಿನಿಂದ ಅಧಿಕಾರಿಗಳನ್ನು ಛೂ ಬಿಟ್ಟು ಅಧಿಕಾರಿಗಳೇ ಮಾಡಿರುವ ಸಣ್ಣಪುಟ್ಟ ತಪ್ಪುಗಳನ್ನು ನೆಪವಾಗಿಟ್ಟುಕೊಂಡು ವಜಾಗೊಳಿಸಿರುವುದು ತಾಲೂಕಿನ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರೈತರ ಸಾಗುವಳಿ ಪತ್ರಗಳನ್ನು ವಜಾಗೊಳಿಸಿರುವ ಆದೇಶವನ್ನು ಮುಂದಿನ 10 ದಿನದೊಳಗೆ ಹಿಂಪಡೆಯದಿದ್ದರೆ ಪಟ್ಟಣದ ತಾಲೂಕು ಕಚೇರಿ ಎದುರು ಅಮರಣಾಂತ ಉಪವಾಸ ನಡೆಸುವುದಾಗಿ ಮಾಜಿ ಶಾಸಕ ಸುರೇಶ್‌ಗೌಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು.

ತಾಲೂಕಿನ 694 ರೈತರ ಸಾಗುವಳಿ ಪತ್ರಗಳನ್ನು ರಾಜ್ಯ ಸರ್ಕಾರ ವಜಾಗೊಳಿಸಿರುವುದನ್ನು ಖಂಡಿಸಿ ಪಟ್ಟಣದ ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಶುಕ್ರವಾರ ನಡೆದ ಪ್ರತಿಭಟನಾ ಮೆರವಣಿಗೆ ನಂತರ ಮಂಡ್ಯ ವೃತ್ತದಲ್ಲಿ ಮಾತನಾಡಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ನನ್ನ ಹಿಂಬಾಲಕರಿಗೆ ಕೇವಲ ಒಂದು ಗುಂಟೆ ಜಮೀನು ಮಂಜೂರು ಮಾಡಿಕೊಟ್ಟಿರುವುದನ್ನು ಸಾಬೀತುಪಡಿಸಿದರೆ ಅವರು ಹೇಳಿದ್ದಕ್ಕೆ ಶರಣಾಗುತ್ತೇನೆ. ನನ್ನ ಅವಧಿಯಲ್ಲಿ ಕಳೆದ ಮೂರ್‍ನಾಲ್ಕು ದಶಕಗಳಿಂದ ಅನುಭೋಗದಲ್ಲಿದ್ದ ಹಾಗೂ ಅರ್ಹತೆ ಇದ್ದವರಿಗಷ್ಟೇ ಜಮೀನು ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದೇನೆಯೇ ಹೊರತು ಯಾವುದನ್ನು ಕಾನೂನು ಮೀರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ರಾಜಕೀಯ ಮಾಡದೆ ತಾಲೂಕಿನ ಜನರು ನೀಡಿದ ಅಧಿಕಾರವನ್ನು ರೈತರಿಗೆ ಅನುಕೂಲವಾಗುವಂತೆ ಬಳಸಿದ್ದೇನೆ. ಈಗಿನ ಶಾಸಕರ ರೀತಿ ವೈಯಕ್ತಿಕ ಲಾಭಕ್ಕಾಗಿ ಅಥವಾ ಬೇನಾಮಿ ಹೆಸರಿಗೆ ಜಮೀನು ಮಂಜೂರು ಮಾಡಿಕೊಂಡಿಲ್ಲ ಎಂದು ತಿಳಿಸಿದರು.

ನನ್ನ ಕುಟುಂಬ ಅಥವಾ ನನ್ನ ಸಂಬಂಧಿಕರಿಗೆ ನಾನು ಜಮೀನು ಮಂಜೂರು ಮಾಡಿಕೊಂಡಿದ್ದರೆ ಅಥವಾ ಅರ್ಜಿದಾರರಲ್ಲದವರಿಗೆ ಜಮೀನು ಮಂಜೂರು ಮಾಡಿದ್ದರೆ, ಯಾರಾದರೂ ಒಬ್ಬ ರೈತನಿಂದ ಒಂದು ರುಪಾಯಿ ಲಂಚ ಪಡೆದು ಜಮೀನು ಮಂಜೂರು ಮಾಡಿದ್ದರೆ ಚಲುವರಾಯಸ್ವಾಮಿ ಹೇಳಿದ ಕಡೆ ಬಂದು ಪ್ರಮಾಣ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಈ ಹಿಂದೆ ಸಚಿವನಾಗಿ, ಶಾಸಕನಾಗಿ ಅಧಿಕಾರ ಅನುಭವಿಸಿರುವ ಚಲುವರಾಯಸ್ವಾಮಿಗೆ ಜನರು ಅಧಿಕಾರ ಕೊಟ್ಟಿದ್ದ ಸಂದರ್ಭದಲ್ಲಿ ಯಾಕೆ ರೈತರಿಗೆ ಜಮೀನು ಮಂಜೂರು ಮಾಡಲಿಲ್ಲ. ಈಗ ನಾನು ಮಂಜೂರು ಮಾಡಿದ್ದಕ್ಕೆ ಹೊಟ್ಟೆ ಕಿಚ್ಚಿನಿಂದ ಅಧಿಕಾರಿಗಳನ್ನು ಛೂ ಬಿಟ್ಟು ಅಧಿಕಾರಿಗಳೇ ಮಾಡಿರುವ ಸಣ್ಣಪುಟ್ಟ ತಪ್ಪುಗಳನ್ನು ನೆಪವಾಗಿಟ್ಟುಕೊಂಡು ವಜಾಗೊಳಿಸಿರುವುದು ತಾಲೂಕಿನ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ಈಗ ವಜಾಗೊಳಿಸಿರುವ ಆದೇಶವನ್ನು ಮುಂದಿನ 10 ದಿನದೊಳಗೆ ಹಿಂಪಡೆಯದಿದ್ದರೆ ಅಮರಣಾಂತ ಉಪವಾಸ ಕೂರುತ್ತೇನೆ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲೂಕಿನ ಹಾಲಾಳು ಸರ್ವೇ ನಂಬರ್ 97ರ ಬಗ್ಗೆ ಸಚಿವರು ತನಿಖೆ ನಡೆಸಲಿ. ಇದು ಯಾರ ಬೇನಾಮಿ ಆಸ್ತಿ ಎಂಬುದನ್ನು ಬಹಿರಂಗಪಡಿಸಲಿ. ಕಾಂಗ್ರೆಸ್ ಪಕ್ಷದ ಕೆಲ ಮುಖಂಡರೇ ನಕಲಿ ದಾಖಲೆ ಸೃಷ್ಟಿಯ ರೂವಾರಿಗಳು. ಅದನ್ನು ತನಿಖೆ ನಡೆಸಿ ಸತ್ಯ ಹೊರ ತರಲಿ. ಇನ್ನುಮುಂದೆ ತಾಲೂಕಿನಲ್ಲಿ ಅಕ್ರಮವಾಗಿ ಮಾಡಿರುವ ಆಸ್ತಿಗಳ ವಿವರಗಳನ್ನು ದಾಖಲೆಗಳ ಸಮೇತ ಪ್ರತಿನಿತ್ಯ ಮಾಧ್ಯಮಗಳ ಮೂಲಕ ಜನರ ಮುಂದಿಡುತ್ತೇನೆ ಎಂದರು.

ಮನೆ ಮಾರಿಯಾದರೂ ನ್ಯಾಯಕೊಡಿಸುವೆ:

ರಾಜಕೀಯ ದ್ವೇಷಕ್ಕಾಗಿ ಹಾಗೂ ಮೇಕೆದಾಟು ಯೋಜನೆಗೆ ಜಮೀನು ಕೊಡುವ ಉದ್ದೇಶಕ್ಕಾಗಿ ಸಾಗುವಳಿಯನ್ನು ವಜಾಗೊಳಿಸಿರುವ ಸರ್ಕಾರದ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೇನೆ. ಅದಕ್ಕೆ ತಗಲುವ ಖರ್ಚು ವೆಚ್ಚವನ್ನು ನಾನೇ ಭರಿಸುತ್ತೇನೆ. ನನ್ನ ಮನೆ, ಆಸ್ತಿ ಮಾರಿಯಾದರೂ ತಾಲೂಕಿನ ರೈತರಿಗೆ ನ್ಯಾಯ ಕೊಡಿಸುತ್ತೇನೆ. ತಪ್ಪು ಮಾಡಿದ್ದರೆ ನನ್ನನ್ನು ಜೈಲಿಗೆ ಕಳುಹಿಸಲಿ, ಆದರೆ, ತಾಲೂಕಿನ ರೈತರ ಹೊಟ್ಟೆಮೇಲೆ ಹೊಡೆಯಬೇಡಿ ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಬೇರೆ ಕಡೆಗಳಲ್ಲಿ ಅರಣ್ಯ ಇಲಾಖೆಗೆ ಬದಲಿ ಜಮೀನು ಕೊಡಬೇಕಿದೆ. ಅದಕ್ಕಾಗಿಯೇ ತಾಲೂಕಿನ ರೈತರಿಗೆ ಮಂಜೂರಾಗಿದ್ದ ಆದೇಶವನ್ನು ವಜಾಗೊಳಿಸಲಾಗಿದೆ. ಜಲಸಂಪನ್ಮೂಲ ಸಚಿವರು ಮೇಕೆದಾಟು ಯೋಜನೆಗೆ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಿ ಕಮಿಷನ್ ಹೊಡೆಯುವ ಆತುರದಲ್ಲಿದ್ದಾರೆಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿ. ನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್ ಡಾ.ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆಬಾಲು, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಮುಖಂಡರಾದ ಕುಶ, ಡಿ.ಟಿ.ಶ್ರೀನಿವಾಸಯ್ಯ, ಸಂತೋಷ್, ಕಂಚಿನಕೋಟೆ ಮೂರ್ತಿ, ಅಧಿಪತಿ ಗಿರೀಶ್, ಕಲ್ಲೇನಹಳ್ಳಿ ದಿನೇಶ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮೇನಕಾ ಸೇರಿದಂತೆ ಜೆಡಿಎಸ್ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.