ಸಾಲಮನ್ನಾ, ಬೆಳೆವಿಮೆ ಪಾವತಿ, ಜಿಲ್ಲೆಯ ಎಲ್ಲಾ ತಾಲೂಕಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯಿಂದ ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜರುಗಿತು.
ವಿವಿಧ ಬೇಡಿಕೆಗಳಿಗೆ ಕರ್ನಾಟಕ ರೈತ ಸಂಘ, ರೈತಪರ ಸಂಘಟನೆ ಆಗ್ರಹಕನ್ನಡಪ್ರಭ ವಾರ್ತೆ ರೋಣ
ಸಾಲಮನ್ನಾ, ಬೆಳೆವಿಮೆ ಪಾವತಿ, ಜಿಲ್ಲೆಯ ಎಲ್ಲಾ ತಾಲೂಕಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯಿಂದ ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜರುಗಿತು.ಪಟ್ಟಣದ ಸಿದ್ಧಾರೂಢ ಮಠದಿಂದ ಪಾದಯಾತ್ರೆ ಕೈಗೊಂಡು ಸೂಡಿ ವೃತ್ತ, ಮುಲ್ಲನಬಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೇಡಿಕೆಗೆ ಆಗ್ರಹಿಸಿ, ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ಧರಣಿ ಕುಳಿತರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರಡ್ಡಿ ಮಾತನಾಡಿ, ರೋಣ-ಗಜೇಂದ್ರಗಡ ತಾಲೂಕಿನಲ್ಲಿ ಬಹುತೇಕ ರೈತರು ಮಳೆ ಆಶ್ರಿತ ವ್ಯವಸಾಯವನ್ನೆ ಅವಲಂಬಿಸಿದ್ದು, ಹವಾಮಾನ ವೈಪರಿತ್ಯಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕೈಗೆ ಬಂದ ಬೆಳೆ ಮನೆಗೆ ಬಾರದೆ ಹಾನಿಯಾಗಿದೆ. ಅಲ್ಪ ಸ್ವಲ್ಪ ಬೆಳೆ ಬಂದರೂ ಅದಕ್ಕೂ ಕೂಡ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದಂತಾಗಿದೆ. ಬೆಳೆನಾಶವಾದಾಗಲೂ ಕೂಡ ವಿಮಾ ಕಂಪನಿಗಳ ಬ್ರಹ್ಮಾಂಡ ಬ್ರಷ್ಟಾಚಾರದ ಫಲಾವಾಗಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಬಾರದಂತಾಗಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ರಾಜಕಾರಣಿಗಳು ಚಕಾರ ಎತ್ತುವುದಿಲ್ಲ. ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ಶೇ. 90ರಷ್ಟು ಹೆಸರು, ಗೋವಿನಜೋಳ, ಈರುಳ್ಳಿ, ಶೇಂಗಾ, ಮೆಣಸಿನಕಾಯಿ ಬೆಳೆ ಮಳೆ ಇಲ್ಲದೆ ಸಂಪೂರ್ಣ ನಾಶವಾಗಿವೆ. ರೈತರ ಪರಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭಗಳಲ್ಲಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ರೈತ ಮುಖಂಡರಾದ ವೀರೇಶ ದೊಡ್ಡಣ್ಣವರ, ಶಿವಲಿಂಗ ಬೊಪಳಾಪೂರ, ಮುತ್ತಣ್ಣ ಕುರಿ ಮಾತನಾಡಿ, ರೋಣ, ಗದಗ, ಶಿರಹಟ್ಟಿ, ಲಕ್ಷ್ಮೀಶ್ವರ, ಮುಂಡರಗಿ, ನರಗುಂದ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಬೇಕು. ರೈತರ ಬೆಳೆ ಪರಿಹಾರ ಶೀಘ್ರವಾಗಿ ವಿತರಿಸಬೇಕು. ಎಲ್ಲಾ ಬೆಳೆಗಳಿಗೆ ವಿಮಾ ಮೊತ್ತವನ್ನು ಶೀಘ್ರ ಪಾವತಿಸಬೇಕು. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು. ರೈತ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿದ ಕೇಂದ್ರ ಆಹಾರ ನಿಗಮದ ನಿರ್ದೇಶಕ ರವಿ ದಂಡಿನ, ರೋಣ ತಾಲೂಕು ವಿಪರೀತ ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದರೂ ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ರೋಣವನ್ನು ಪರಿಗಣಿಸದೆ ಈ ಭಾಗದ ರೈತರಿಗೆ ಘೋರ ಅನ್ಯಾಯವೆಸಗಿದೆ ಎಂದರು.ರೋಣ ಶಾಸಕರು ಆಗಿರುವ ಸಭಾಧ್ಯಕ್ಷ ಜಿ.ಎಸ್. ಪಾಟೀಲರು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ತಕ್ಷಣವೇ ರೋಣ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ತಹಶಿಲ್ದಾರ ನಾಗರಾಜ ಕೆ. ಭೇಟಿ ನೀಡಿದರು. ಜಿಲ್ಲಾಧಿಕಾರಿ ಬರುವಂತೆ ಧರಣಿನಿರತರು ಒತ್ತಾಯಿಸಿದರು. ಬಳಿಕ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಭೇಟಿ ನೀಡಿ, ಅಧಿವೇಶನ ನಡೆದಿದ್ದು, ರೈತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ರೋಣ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿನ ತಾಲೂಕುಗಳನ್ನು ಬರಪೀಡಿತ ತಾಲೂಕಾಗಿಸಲು, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಚರ್ಚೆ ನಡೆದಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತದೆ. ಆದ್ದರಿಂದ ರೈತರು ಧರಣಿ ಕೈಬಿಡುವಂತೆ ವಿನಂತಿಸಿದರು. ರೈತರ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.ಪ್ರತಿಭಟಣೆಯಲ್ಲಿ ರೈತ ಮುಖಂಡರಾದ ಮಾದೇಗೌಡ ಪಾಟೀಲ, ಸಂಗಣ್ಣ ದಂಡಿನ, ವೆಂಕನಗೌಡ ಪಾಟೀಲ, ಬಸನಗೌಡ ಚನ್ನಪ್ಪಗೌಡ್ರ, ಶಾಂತವೀರಯ್ಯ ಬೆನಹಾಳಮಠ, ಶರಣಪ್ಪ ಧರ್ಮಾಯತ, ಪರಸಪ್ಪ ಶಂಕರಿ, ಲಕ್ಕಪ್ಪ ಹರಪನಹಳ್ಳಿ, ಸಂಗಪ್ಪ ಪವಾಡಶೆಟ್ಟಿ, ವಸಂತಕುಮಾರ ಮಾರನಬಸರಿ, ಬಾವರಾಜ ತೊಂಡಿಹಾಳ, ಯಮನೂರ ಬಿಚ್ಚುಮನಿ, ಶರಣಪ್ಪ ಚನ್ನಪ್ಪಗೌಡ್ರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.