ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಹಾಗೂ ತಾಲೂಕು ಆಡಳಿತ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೃಹತ್ ಬಾರುಕೋಲು ಚಳವಳಿ ಮೂಲಕ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು.ದಲಿತ ಸಂಘಟನೆ, ಛಲವಾದಿ ಮಹಾಸಭಾ, ಜನಸಂಗ್ರಾಮ ಪರಿಷತ್ ಹಾಗೂ ಕೆಆರ್ಎಸ್ ಪಕ್ಷದ ಬೆಂಬಲದೊಂದಿಗೆ ಆಯೋಜಿಸಿದ್ದ ಬಾರುಕೋಲು ಚಳವಳಿಯಲ್ಲಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಖಾಸಗಿ ಬಸ್ ನಿಲ್ಧಾಣದ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅಲ್ಲಿಂದ ಎಂಜಿಎಸ್ ರಸ್ತೆ ಮೂಲಕ ಪಾದಯಾತ್ರೆಯೊಂದಿಗೆ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಬಳಿಕ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾದರು.ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಮಾತನಾಡಿ, ನಂಜನಗೂಡು ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಹಣಬಾಕ ಅಧಿಕಾರಿಗಳ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ ರೈತರ ಸಮಸ್ಯೆಗಳ ಬಗ್ಗೆ ಉದಾಸೀನ ತೋರವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಬಾರುಕೋಲು ಚಳವಳಿ ಕೈಗೆತ್ತಿಕೊಳ್ಳಲಾಗಿದೆ. ರೈತರ ಕೃಷಿ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ಅಧಿಕಾರಿಗಳಿಗೆ ಲಂಚದ ಹಣ ನೀಡಲೇಬೇಕು. ಜಮೀನಿನ ದಾಖಲಾತಿಗಳು, ವಂಶವೃಕ್ಷ, ಜನನ ಮತ್ತು ಮರಣ ದೃಢೀಕರಣ ಇತರೆ ದಾಖಲಾತಿಗಳನ್ನು ಪಡೆಯಲು ಲಂಚದ ಹಣ ನೀಡದಿದ್ದರೆ ಕೆಲಸ ನಡೆಯುತ್ತಿಲ್ಲ, ಆದ್ದರಿಂದ ರೈತರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕಿದ್ದರೆ ಸಾಕಷ್ಟು ವರ್ಷಗಳಿಂದ ಒಂದೇ ಸ್ಥಳದಲ್ಲಿ ನೆಲೆಯೂರಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎಂದು ಆಗ್ರಹಿಸಿದರು.ತಾಲೂಕಿನಲ್ಲಿ ರೈತರು ಹೋರಾಟದ ಮೂಲಕ ಶಾಸಕರನ್ನು ಹಳ್ಳಿಗಳಿಗೆ ಪ್ರವೇಶ ನೀಡದೆ ತಡೆಯೊಡ್ಡಿರುವ ನಿರ್ದೇಶನಗಳಿದ್ದು, ಚುನಾಯಿತ ಜನಪ್ರತಿನಿಧಿಗಳು ರೈತರನ್ನು ಲಘುವಾಗಿ ಪರಿಗಣಿಸಿದಲ್ಲಿ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು, ಜೊತೆಗೆ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಆಗಮಿಸಿ ರೈತರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಪ್ರಕಟಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.ಬಳಿಕ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸ್ಮಿತಾ ರಾಮು ಪ್ರತಿಭಟನಾ ನಿರತ ರೈತರೊಂದಿಗೆ ಮಾತನಾಡಿ, ತಾಲೂಕು ಕಚೇರಿಯಲ್ಲಿ ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್ ಲೈನ್ ಮೂಲಕ ನಡೆಯುತ್ತಿದ್ದು, ಅನಗತ್ಯವಾಗಿ ಯಾವುದೇ ಅರ್ಜಿಗಳನ್ನು ವಿಳಂಬವಾಗಿ ವಿಲೇವಾರಿ ಮಾಡುತ್ತಿಲ್ಲ, ಇನ್ನು ರೈತರ ಬೇಡಿಕೆಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರಾದರೂ ಪ್ರತಿಭಟನಾ ನಿರತ ರೈತರು ಒಪ್ಪದೆ ಹೋರಾಟವನ್ನು ಮುಂದುವರೆಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸೂರಳ್ಳಿ ಮಹಾದೇವ ನಾಯಕ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿ ನಾಗಭೂಷಣ್, ಜನ ಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ವಿಜಯ್ ಕುಮಾರ್, ರಾಮಕೃಷ್ಣ, ಕಳ್ಳಿಪುರ ಮಹದೇವಸ್ವಾಮಿ, ಆಲಗೂಡು ಮಹದೇವು,ಶಂಕರ ನಾಯಕ, ದೊಡ್ಡಯ್ಯ, ಶ್ವೇತ, ಸವಿತ, ದೇವರಾಜ್, ಶಿವಕುಮಾರ್, ಮಹದೇವಸ್ವಾಮಿ ಸೇರಿದಂತೆ 800ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದರು.