ಸಾರಾಂಶ
ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬಿಎಸ್ ಪಿಎಲ್ ಸ್ಟೀಲ್ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ನ.1ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಗುರುವಾರ ಪೂರ್ವಭಾವಿ ಸಭೆ ನಡೆಸಿ ನಿರ್ಧರಿಸಲಾಗಿದೆ.ಎಂಎಸ್ಪಿಎಲ್ ಘಟಕದ ಒಂದು ಚಿಮಣಿಯಿಂದ ಹೊರಸೂಸುವ ಕಪ್ಪು ರಸಾಯನ ದೂಳು, ಕಲ್ಲಿದ್ದಲಿನ ಹಾರು ಬೂದಿ, ಪಶ್ಚಿಮ ದಿಕ್ಕಿನಲ್ಲಿರುವ ಬೆಳವಿನಾಳ, ತರಕಾರಿ ಹರಾಜು ಮಾರುಕಟ್ಟೆ, ಜಿಲ್ಲಾ ಆಡಳಿತ ಭವನ, ಕಿಮ್ಸ್ ಜಿಲ್ಲಾ ಆಸ್ಪತ್ರೆ, ಡಾಲರ್ಸ್ ಕಾಲನಿ, ಉಸಿರಾಟ, ಕೆಮ್ಮು, ಕಫದಿಂದ ಪುಪ್ಪಸ, ಹೃದಯ ಸಂಬಂಧಿ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಫೆ. 24 ರಂದು ಕೊಪ್ಪಳ ನಗರದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡಲಾಯಿತು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನಪ್ರತಿನಿಧಿ ಮತ್ತು ವೇದಿಕೆ ಮುಖಂಡರ ನಿಯೋಗ ಭೇಟಿ ಮಾಡಿ ವಿಸ್ತರಣೆಗೆ ಶಾಶ್ವತ ತಡೆ ಮಾಡಬೇಕೆಂದು ಕೇಳಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಸರ್ಕಾರ ತನ್ನ ಹೇಳಿಕೆಗಳ ಮಜಲು ಬದಲಾಯಿಸುತ್ತಾ ಕೇಂದ್ರದ ಕಡೆ ತೋರಿಸುವುದು, ನ್ಯಾಯಾಲಯದಲ್ಲಿ ಬಾಕಿ ಎಂದು ಹೇಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದಲ್ಲದೆ ಜಪಾನ್ ದೇಶದ ಸುಮಿಟೊಮಿ ಕಂಪನಿ ಸಹಭಾಗಿತ್ವದ ₹೨೩೪೫ ಕೋಟಿ ಹೂಡಿಕೆಯ ಕನಕಾಪುರ ಮುಕುಂದ್-ಸುಮಿ ಉಕ್ಕು ಘಟಕ ವಿಸ್ತರಣೆಗೆ ಮುಂದಾಗಿರುವುದು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಹೀಗಾಗಿ, ನಗರ ಹೃದಯ ಭಾಗದ ಅಶೋಕ ವೃತ್ತದಲ್ಲಿ ನ.೧ ರಿಂದ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಪ್ರಾರಂಭಿಸಲು ನಿರ್ಧರಿಸಲಾಗಿದೆ.ಈ ಸಭೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಾಜಿ ಎಂ.ಎಲ್.ಸಿ.ಸಂಗಟಿ ಕರಿಯಣ್ಣ, ಸಾಹಿತಿ ಎ.ಎಂ.ಮದರಿ, ಸಂಚಾಲಕ ಡಿ.ಎಚ್.ಪೂಜಾರ, ವಕೀಲ ರಾಜು ಬಾಕಳೆ, ಎಂ.ಬಿ.ಗೋನಾಳ, ಡಿ.ಎಂ.ಬಡಿಗೇರ, ಮುದುಕಪ್ಪ ಹೊಸಮನಿ, ಮಹಾಂತೇಶ ಕೊತಬಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಫಾಸ್ಟರ್ ಅಸೋಸಿಯೇಶನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ, ಎಸ್.ಎ. ಗಫಾರ್. ಪ್ರಾಣೇಶ್ ಪೂಜಾರ, ಸಾವಿತ್ರಿ ಮುಜುಂದಾರ, ವಕೀಲ ವಿಜಯ ಅಮೃತರಾಜ್, ಹನುಮಂತಪ್ಪ ಗೊಂದಿ, ಎಸ್.ಬಿ. ರಾಜೂರ, ಯಲ್ಲಪ್ಪ ಬಂಡಿ, ಡಾ. ಬಸವರಾಜ ಪೂಜಾರ ಮೊದಲಾದವರು ಇದ್ದರು.